ಕಗ್ಗದ ಸಂದೇಶ- ದುಡಿಮೆಯಿಂದಲೇ ಅನ್ನ, ಅನ್ನದಿಂದ ಶಕ್ತಿ…

ದೊರೆವ ಜಿತಕೆ ದುಡಿತ, ಮರುದಿನದ ಚಿಂತೆ ಮಿತ|
ಹೊರೆಯ ಹಗುರಾಗಿಸುವ ಕೆಳೆಯರೊಡನಾಟ||
ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು|
ಸರಿಗೂಡೆ ಸುಕೃತವಿದು–ಮಂಕುತಿಮ್ಮ||

ದೊರಕಿದ ಕೆಲಸವನ್ನು ನಿಷ್ಠೆಯಿಂದ ಮಾಡುವುದು. ಮರುದಿನದ ಬಗ್ಗೆ ಚಿಂತೆಯನ್ನು ಮಾಡುವುದನ್ನು ಬಿಟ್ಟು ಬದುಕಿನ ಭಾರವನ್ನು ಹಗುರಾಗಿಸುವಂತಹ ಗೆಳೆಯರ ಒಡನಾಟವನ್ನು ಹೊಂದುವುದು, ಸರಳತೆ ಹಾಗೂ ಸಂತೃಪ್ತಿಯಿಂದ ಬಾಳುವುದರಿಂದ ಭಗವಂತನ ಅನುಗ್ರಹವನ್ನು ಪಡೆವ ಪುಣ್ಯ ಪ್ರಾಪ್ತಿಯಾಗುವುದು ಎಂದು ಮಾನ್ಯ ಡಿವಿಜಿ ಈ ಮುಕ್ತಕದಲ್ಲಿ ಹೇಳಿದ್ದಾರೆ
ಬದುಕನ್ನು ಹೇಗೆ ಬೇಕೋ ಹಾಗೆ ರೂಪಿಸಿಕೊಳ್ಳುವ ಅವಕಾಶ ನಮಗಿರುತ್ತದೆ. ಬದುಕು ಹಸನಾಗುವುದು ಮುಖ್ಯವಾಗಿ ದುಡಿಮೆಯಿಂದ.

ಬೀಜ ಬಿತ್ತದೆ ಬರಿದೆ ಮುಗಿಲ ನೋಡುವೆ ಯಾಕೆ?|
ಮಳೆ ಬಂದರೇನು ಸುಖ ಏನಿರದೆ ನೆಲಕೆ?||
ದುಡಿಮೆಯಿಂದಲೇ ಅನ್ನ, ಅನ್ನದಿಂದಲೇ ಶಕ್ತಿ|
ಮಾಡೊಂದು ಕಾರ್ಯವನು -ಮುದ್ದುರಾಮ||

ಎಂಬ ಕವಿ ಕೆ. ಶಿವಪ್ಪನವರ ಮಾತಿನಂತೆ ವ್ಯರ್ಥ ಚಿಂತೆ ಮಾಡುವುದನ್ನು ಬಿಟ್ಟು ಕೈಗೆ ದೊರೆತ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ದುಡಿದ ದುಡಿಮೆಗೆ ದೊರೆತ ಫಲವನ್ನು ದೇವರ ಪ್ರಸಾದವೆಂದು ಭಕ್ತಿಯಿಂದ‌ ಅನುಭವಿಸಬೇಕು.
ಬದುಕಿನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಒಡನಾಡಿಗಳು ಬೇಕು. ಭವಿಷ್ಯ ನಮ್ಮ ಮುಂದೆ ಅನೇಕ ಆಯ್ಕೆಗಳನ್ನು ನೀಡುತ್ತಾ ಹೋಗುತ್ತದೆ. ನಾವು ನಮ್ಮ ಮನೋಭಾವಕ್ಕೆ ಸರಿಹೊಂದುವ ಸಜ್ಜನರನ್ನು ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಜಾಣತನ. ‘ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ’ ಎಂಬ ಸರ್ವಜ್ಞನ ನುಡಿಯಂತೆ ಸಾತ್ವಿಕ ಗುಣದ ಆಪ್ತರು ಬದುಕಿನ ಪಾರಮಾರ್ಥಿಕತೆಗೆ ನೆರವಾಗುತ್ತಾರೆ. ಮಿತಿಯರಿತು ಸರಳ ಜೀವನ ನಡೆಸುವುದರಿಂದ ಸಂತೃಪ್ತಿ ಪ್ರಾಪ್ತವಾಗುವುದು. ಜೀವನದ ಪ್ರತಿ ಹೆಜ್ಜೆಯಲ್ಲೂ ಪರಮಾತ್ಮನನ್ನು ಮರೆಯದೆ ಹಿತಮಿತವನ್ನು ಕಾಯ್ದುಕೊಂಡು ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಸಾಪ ಕಾರ್ಕಳ ಘಟಕ ಅಧ್ಯಕ್ಷರು.

error: Content is protected !!
Scroll to Top