ಪತ್ರಕರ್ತರಿಗೆ ನಗದು ಉಡುಗೊರೆಯಿಂದ ಸರಕಾರಕ್ಕೆ ಮುಜುಗರ

ಜನಾಧಿಕಾರ ಸಂಘರ್ಷ ಪರಿಷತ್‌ನಿಂದ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯಿಂದ ಕೆಲವು ಆಯ್ದ ಪತ್ರಕರ್ತರಿಗೆ ದೀಪಾವಳಿ ಹಬ್ಬಕ್ಕೆ ನಗದು ಉಡುಗೊರೆ ನೀಡಿರುವುದು ಸರಕಾರಕ್ಕೆ ತೀವ್ರ ಮುಜುಗರ ತಂದಿದೆ. ಮುಖ್ಯಮಂತ್ರಿಗಳು ಈ ಕುರಿತು ಕ್ಷಮೆ ಕೋರಿ, ತನಗೆ ನಗದು ಉಡುಗೊರೆ ಕೊಟ್ಟಿರುವ ಬಗ್ಗೆ ಮಾಹಿತಿ ಇರಲಿಲ್ಲ, ಈ ಬಗ್ಗೆ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದಾರೆ.
ರಾಜಕೀಯ ವರದಿಗಾರಿಕೆ ವಿಭಾಗದಲ್ಲಿರುವ ಕೆಲವು ಹಿರಿಯ ಪತ್ರಕರ್ತರು ತಮಗೆ ಅ.22 ರಂದು ಹಬ್ಬದ ಉಡುಗೊರೆ ಬಾಕ್ಸ್ ಗಳಲ್ಲಿ ಸಿಹಿ ಹಾಗೂ ಡ್ರೈ ಫ್ರೂಟ್ಸ್ ಇರುವ ಬಾಕ್ಸ್ ಗಳು ಹಾಗೂ ಒಂದು ಲಕ್ಷ ರೂಪಾಯಿ ನಗದು ಇರುವ ಲಕೋಟೆ ಬಂದಿತ್ತು ಎಂದು ಆರೋಪಿಸಿದ್ದರು.
ಪ್ರತಿ ವರ್ಷದ ದೀಪಾವಳಿಗೆ ಸಿಎಂಒಯಿಂದ ಸಿಹಿ ಹಾಗೂ ಡ್ರೈಫ್ರೂಟ್ಸ್ ಗಳ ಉಡುಗೊರೆ ಬರುವುದು ಸಾಮಾನ್ಯ ವಿಷಯವಾಗಿದೆ. ಆದರೆ ಈ ಬಾರಿ ಲಕೋಟೆಯಲ್ಲಿ ಒಂದು ಲಕ್ಷ ರೂಪಾಯಿ ಹಣ ಬಂದಿದ್ದು ಪತ್ರಕರ್ತರ ವಲಯದಲ್ಲಿ ಅಚ್ಚರಿ ಹಾಗೂ ಆಕ್ರೋಶಗಳಿಗೆ ಕಾರಣವಾಗಿತ್ತು. ಕೆಲವು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿ ನಗದು ಉಡುಗೊರೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಸಿಎಂಒಗೆ ಬರೆದಿದ್ದರು. ಈ ರೀತಿಯಾಗಿ ಎಷ್ಟು ಮಂದಿ ಪತ್ರಕರ್ತರಿಗೆ ನಗದು ಉಡುಗೊರೆ ಹೋಗಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಇದು ತೆರಿಗೆದಾರರ ಹಣದ ದುರುಪಯೋಗ, ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಈ ರೀತಿ ಉಡುಗೊರೆ ನೀಡುವುದಕ್ಕೆ ಹಣದ ಮೂಲ ಯಾವುದು? ಎಷ್ಟು ಮಂದಿಗೆ ಈ ರೀತಿ ಹಣ ನೀಡಲಾಗಿದೆ ಹಾಗೂ ಎಷ್ಟು ಮಂದಿ ಅದನ್ನು ಹಿಂದಿರುಗಿಸಿದ್ದಾರೆ ಎಂಬುದನ್ನು ರಾಜ್ಯದ ಜನತೆ ತಿಳಿಯಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕರ್ನಾಟಕದ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿ ಸಿಎಂ ಬೊಮ್ಮಾಯಿ ಹಾಗೂ ಅವರ ಕಚೇರಿಯಿಂದ ಲಂಚದ ಆಮಿಷದ ಹಗರಣವನ್ನು ಬಯಲಿಗೆಳೆದಿರುವ ದಿಟ್ಟ ಪತ್ರಕರ್ತರಿಗೆ ಹ್ಯಾಟ್ಸ್ ಆಫ್ ಎಲ್ಲರೂ ಮಾರಾಟಕ್ಕೆ ಇಲ್ಲ ಎಂಬುದನ್ನು ಬಿಜೆಪಿ ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ) ಈ ವಿಷಯವಾಗಿ ಲೋಕಾಯುಕ್ತರಿಗೆ ದೂರು ನೀಡಿ ದೀಪಾವಳಿ ಉಡುಗೊರೆಯ ಸೋಗಿನಲ್ಲಿ ಪತ್ರಕರ್ತರಿಗೆ ಲಂಚದ ಆಮಿಷವೊಡ್ಡಿರುವ ಸಿಎಂ ಬೊಮ್ಮಾಯಿ ಹಾಗೂ ಅವರ ಮಾಧ್ಯಮ ಸಂಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದೆ.
ಲಂಚ, ಭ್ರಷ್ಟಾಚಾರ, ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಸಿಎಂ ಹಾಗೂ ಅವರ ಮಾಧ್ಯಮ ಸಂಯೋಜಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜೆಎಸ್‌ಪಿಯ ಸಹ ಅಧ್ಯಕ್ಷ ಆದರ್ಶ್ ಆರ್. ಅಯ್ಯರ್ ಆಗ್ರಹಿಸಿದ್ದಾರೆ.

Latest Articles

error: Content is protected !!