Saturday, December 10, 2022
spot_img
Homeಸಿನೆಮಾಇಂದು ಪುನೀತ್‌ ರಾಜ್‌ಕುಮಾರ್‌ ಪುಣ್ಯತಿಥಿ

ಇಂದು ಪುನೀತ್‌ ರಾಜ್‌ಕುಮಾರ್‌ ಪುಣ್ಯತಿಥಿ

ರಾಜ್ಯದೆಲ್ಲೆಡೆ ಪ್ರೀತಿಯ ನಟನಿಗೆ ನಮನ; ಕಂಠೀರವ ಸ್ಟೇಡಿಯಂನಲ್ಲಿ ಪೂಜೆ, ಹಾಡು

ಬೆಂಗಳೂರು : ಪುನೀತ್ ರಾಜಕುಮಾರ್ ಅವರು ತೀರಿಕೊಂಡು ಇಂದಿಗೆ (ಅಕ್ಟೋಬರ್ 29) ಒಂದು ವರ್ಷವಾಗುತ್ತದೆ. ಇಂದು ಪುನೀತ್ ರಾಜುಕುಮಾರ್ ಅವರ ಮೊದಲ ಪುಣ್ಯಸ್ಮರಣೆ. ಹೀಗಾಗಿ ರಾಜ್ಯದೆಲ್ಲೆಡೆ ಯುವರಾಜ ಪುನೀತ್ ರಾಜಕುಮಾರ್ ಅವರನ್ನು ನೆನೆದು ನಮನ ಸಲ್ಲಿಸಲಾಗುತ್ತಿದೆ. ಕರುನಾಡ ಜನತೆ ಅಪ್ಪು ಅವರನ್ನು ನೆನೆದು ಕಂಬನಿ ಮಿಡಿಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಪುನೀತ್ ರಾಜುಕುಮಾರ್ ಅವರ ಮೊದಲ ಪುಣ್ಯಸ್ಮರಣೆಯಾದ ಇಂದು ನಾಡಿನೆಲ್ಲೆಡೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಂಠೀರವ ಸ್ಟೇಡಿಯಂನಲ್ಲಿ ರಾತ್ರಿಯಿಂದಲೇ ಅಭಿಮಾನಿಗಳು ಭೇಟಿ ನೀಡಿ ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ.
ಕಂಠೀರವ ಸ್ಟೇಡಿಯಂನಲ್ಲಿ ಗೀತನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಾಡುಗಳ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಗುತ್ತಿದೆ. ಕಳೆದ ರಾತ್ರಿಯಿಂದಲೇ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ದಿನ ಪೂರ್ತಿ ಕಾರ್ಯಕ್ರಮ ನಡೆಯಲಿದೆ.
ಪ್ರಥಮ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಪುನೀತ್ ಸಮಾಧಿ ಸ್ಥಳ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಇಂದು ಕುಟುಂಬಸ್ಥರು ಪೂಜೆ, ಶಾಸ್ತ್ರ ನೆರವೇರಿಸಲಿದ್ದಾರೆ. ಅಪ್ಪುಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಇಟ್ಟು ಕುಟುಂಬಸ್ಥರು ಸಮಾಧಿ ಮುಂದೆ ಪೂಜೆ ಮಾಡಲಿದ್ದಾರೆ. ಕಂಠೀರವ ಸ್ಟುಡಿಯೊ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ಆಗಮಿಸುವ ಸಾಧ್ಯತೆಯಿದ್ದು ಪುಣ್ಯತಿಥಿ ಹಿನ್ನೆಲೆಯಲ್ಲಿ ಆಗಮಿಸುವವರಿಗೆ ಉಪಾಹಾರ, ಊಟ, ನೀರಿನ ವ್ಯವಸ್ಥೆ ಏರ್ಪಡಿಸಲಾಗಿದೆ.
ಅಪ್ಪು ಅಭಿಮಾನಿಗಳಿಗೆ ಊಟದ ವ್ಯವಸ್ಥೆ
ಅಪ್ಪು ಸಮಾಧಿಗೆ ಪೂಜೆ ಮಾಡಿದ ನಂತರದಲ್ಲಿ ಕುಟುಂಬ ಮನೆಗೆ ಮರಳಲಿದೆ. ಅಲ್ಲಿಯೂ ಪೂಜೆ ಇರಲಿದೆ. ವರ್ಷದ ಕಳಸ ಪೂಜೆಯನ್ನು ಕುಟುಂಬ ಮಾಡಲಿದೆ. ಬಳಿಕ ಬಂಧು ಬಳಗಕ್ಕೆ ಭೋಜನ ವ್ಯವಸ್ಥೆ ಇರಲಿದೆ. ಪುನೀತ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳಿಗೆ ಅನ್ನದಾನವಿರಲಿದೆ. ಎಷ್ಟೇ ಸಂಖ್ಯೆಯಲ್ಲಿ ಅಭಿಮಾನಿಗಳುಪ ಬಂದರೂ ಊಟದ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.
ಇತ್ತ ಪುನೀತ್ ನಿವಾಸವಿರುವ ಬೆಂಗಳೂರಿನ ಸದಾಶಿವನಗರದಲ್ಲಿ ಪೆಂಡಾಲ್ ಹಾಕಲಾಗಿದ್ದು ಅಲ್ಲಿ ಕೂಡ ಆಗಮಿಸುವವರಿಗೆ ಊಟ-ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಡಾ. ರಾಜ್ ಕುಮಾರ್ ಕುಟುಂಬದ ಕೂಸು ಮೈಸೂರಿನ ಶಕ್ತಿದಾಮದ ಮಕ್ಕಳು ಅಪ್ಪು ಪುಣ್ಯಸ್ಮರಣೆ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಿದ್ದಾರೆ. ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!