ಐವರು ಭ್ರಷ್ಟ ಇಂಜಿನಿಯರ್‌ಗಳನ್ನು ಜೈಲಿಗಟ್ಟಿದ ನ್ಯಾಯಾಲಯ

ಸಂತ್ರಸ್ತರಿಗೆ ಮನೆ ಪರಿಹಾರ ಕೊಡಲು ಲಂಚ ಪಡೆದಿದ್ದ ಸರಾಕಾರಿ ಅಧಿಕಾರಿಗಳು

ಬೆಂಗಳೂರು : ಮನೆ ಹಾನಿಗೀಡಾದವರಿಗೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿದ ನೀರಾವರಿ ಇಲಾಖೆಯ ಐವರು ಇಂಜಿನಿಯರ್‌ಗಳಿಗೆ ತಲಾ ಎರಡು ವರ್ಷ ಜೈಲು ಶಿಕ್ಷೆ ಹಾಗೂ ತಲಾ 70 ಸಾವಿರ ರೂ. ದಂಡ ವಿಧಿಸಿ ಬೆಳಗಾವಿಯ ಸ್ಥಳೀಯ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಬೆಳಗಾವಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ವಿಶೇಷ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
2012ರಲ್ಲಿ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದ ವೃತ್ತ ಕಚೇರಿ (ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ)ಯ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಆಗಿದ್ದ ಬಿ.ಪದ್ಮನಾಭ, ತಾಂತ್ರಿಕ ಸಹಾಯಕರಾಗಿದ್ದ ಆನಂದ ಮಿರ್ಜಿ, ಕಿರಿಯ ಎಂಜಿನಿಯರ್‌ ಆಗಿದ್ದ ಶುಭಾ ಟಿ., ಶಿರಸಂಗಿಯ ಉಪವಿಭಾಗ 5ರ ಕಿರಿಯ ಎಂಜಿನಿಯರ್‌ ಪ್ರಕಾಶ ಹೊಸಮನಿ, ಗದಗ ಜಿಲ್ಲೆಯ ನರಗುಂದದ ಎಂಆರ್‌ಬಿಸಿ ವಿಭಾಗ 1ರ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದ ಎಂ.ಬಿ.ಕವದಿ ಶಿಕ್ಷೆಗೆ ಗುರಿಯಾದವರು.
ಕಗದಾಳ ಗ್ರಾಮದಲ್ಲಿರುವ ಎಲ್ಲ ಮನೆಗಳು ನೀರಿನಿಂದ ಜವುಗು ಹಿಡಿದಿದ್ದವು. ವಾಸಕ್ಕೆ ಯೋಗ್ಯವಿಲ್ಲದ ಕಾರಣ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ನಡೆದಿತ್ತು. ಇದಕ್ಕಾಗಿ ನಡೆದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕಾಯ್ದೆ ಉಲ್ಲಂಘನೆ ನಡೆದಿದೆ. ಈ ಎಂಜಿನಿ ಯರ್‌ಗಳು ಲಂಚ ಕೊಟ್ಟವರಿಗೆ ಹೆಚ್ಚಿನ ಪರಿಹಾರ ಒದಗಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅದೇ ಗ್ರಾಮದ ಹಣಮಪ್ಪ ಮಾದರ ಎಂಬವರು 2012ರ ಜೂನ್‌ನಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು, ಮೇಲಿನ ನೀರಾವರಿ ಇಲಾಖೆಯ ಐವರು ಎಂಜಿನಿಯರ್‌ಗಳು ಕಗದಾಳದ ಹಲವಾರು ನಿವಾಸಿಗಳಿಗೆ ಲಂಚ ಪಡೆದು ಹೆಚ್ಚಿನ ಪರಿಹಾರವನ್ನು ಪಾವತಿಸಿದ್ದಾರೆ ಎಂದು ಆರೋಪಿಸಿದ್ದರು.
ಅಂದಿನ ಲೋಕಾಯುಕ್ತ ಡಿವೈಎಸ್ಪಿಗಳಾದ ಎಚ್‌.ಜಿ. ಪಾಟೀಲ ಹಾಗೂ ಜಿ.ಆರ್‌. ಪಾಟೀಲ ತನಿಖೆ ಕೈಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರವೀಣ ಅಗಸಗಿ ವಾದ ಮಂಡಿಸಿದರು. ಕಗದಾಳದಲ್ಲಿ ಜಲಾವೃತಗೊಂಡು ಹಾನಿಗೊಳಗಾದ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಆದೇಶಿಸಿತ್ತು ಮತ್ತು ಸಂತ್ರಸ್ತ ನಿವಾಸಿಗಳಿಗೆ ಪುನರ್ವಸತಿ ಖಚಿತಪಡಿಸಿಕೊಳ್ಳಲು ಹಾನಿಗೊಳಗಾದ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿತ್ತು. ಎಂಜಿನಿಯರ್‌ಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಲಂಚ ನೀಡಿದವರಿಗೆ ಹೆಚ್ಚಿನ ಪರಿಹಾರವನ್ನು ಮಂಜೂರು ಮಾಡಿದ್ದು ವಿಚಾರಣೆಯಲ್ಲಿ ಸಾಬೀತಾಗಿ ಇದೀಗ ಶಿಕ್ಷೆ ಪ್ರಕಟವಾಗಿದೆ.





























































































































































































































error: Content is protected !!
Scroll to Top