ಕಗ್ಗದ ಸಂದೇಶ – ಹೂ ಮಾಲೆಯಂತೆ ಈ ಸಂಸಾರ…

“ಪೂಸರದಿ ಕಾಂತಿ ಸೌರಭ ಮೊದಲನೆಯ ತಾಸು|

ವಾಸನೆಯ ಹಳಸು ಕೊಳಕೊಳಚೆಯಾ ಬಳಿಕ||

ಮಾಸಿ ನಲುನಲುಗಿ ಮುಳ್ಳಹುದು ಮೂರನೆಯ ತಾಸು|

ಸಂಸಾರ ಕಥೆಯದುವೆ -ಮಂಕುತಿಮ್ಮ|”.

  ಆಗತಾನೇ ಅರಳಿದ ಹೂಗಳಿಂದ ಕಟ್ಟಿದ ಮಾಲೆ ಮೊದಲನೆಯ ತಾಸು ಸುಮಧುರ ಸುವಾಸನೆಯೊಂದಿಗೆ ಸುಂದರವಾಗಿ ಕಂಗೊಳಿಸುತ್ತದೆ.ಎರಡನೆಯ ತಾಸಿನಲ್ಲಿ ಆ ಹೂಗಳು ಬಾಡಿ ಸುವಾಸನೆ ಕಳೆದುಕೊಂಡು ಹಳಸು ವಾಸನೆಯನ್ನು ಬೀರುತ್ತವೆ. ಮೂರನೆಯ ತಾಸು ಸಂಪೂರ್ಣ ಕಾಂತಿ ಮತ್ತು ಸುವಾಸನೆ ಕಳೆದುಕೊಂಡ ಹೂಗಳು ಕೊಳೆತು ನಾರಲು ಆರಂಭಿಸುತ್ತವೆ.ನಮ್ಮ ಸಂಸಾರದ ಕತೆಯು ಹೂವಿನ ಮಾಲೆಯ ಹಾಗೆಯೆ. ಆರಂಭದಲ್ಲಿ ಬಹಳ ಚೆಂದ.ದಿನ ಕಳೆದಂತೆ ಸಂತೋಷ ಸಂಭ್ರಮ ಕಡಿಮೆಯಾಗಿ ಸಂಕಟ ಸಂಕಷ್ಟಗಳು ಆರಂಭವಾಗುತ್ತವೆ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

       

ಸಂಸಾರದ ಕತೆ ಹೂವಿನ ಮಾಲೆಯಂತೆ.ಆಗತಾನೆ ಅರಳಿದ ತಾಜಾ ಹೂಗಳಿಂದ ಕಟ್ಟಿದ ಮಾಲೆ ಮೊದಲನೆಯ ತಾಸು ತನ್ನ ಘಮಘಮಿಸುವ ಸುವಾಸನೆಯಿಂದ ಮತ್ತು ನಳನಳಿಸುವ ಸೊಬಗಿನಿಂದ ಕಣ್ಮನಗಳಿಗೆ ಸಂತಸವನ್ನೀಯುವುದು.ಸಮಯ ಕಳೆದಂತೆ ಬಾಡಿ ಹೋಗುವ ಹೂಗಳು ತಮ್ಮ ಕಾಂತಿ ಮತ್ತು ಸೌರಭ ಎರಡನ್ನು ಕಳೆದುಕೊಳ್ಳುತ್ತವೆ.ಕೊನೆಗೆ ಬಾಡಿ ಒಣಗಿ ಹೋಗುವ ಹೂಗಳು ಸುವಾಸನೆ ಕಳೆದುಕೊಂಡು ಹಳಸಲು ದುರ್ವಾಸನೆ ಬೀರುತ್ತಾ ಮುಟ್ಟಿದರೆ ಮುಳ್ಳಿನಂತೆ ಚುಚ್ಚುತ್ತವೆ.ಸಾಂಸಾರಿಕ ಜೀವನದಲ್ಲಿಯೂ ಕೂಡ ಹಾಗೆಯೆ ಮದುವೆಯಾದ ಆರಂಭದಲ್ಲಿದ್ದ ಸಂತೋಷ,ಸಂಭ್ರಮ ಮತ್ತು ಅನ್ಯೋನ್ಯತೆ ಕಡಿಮೆಯಾಗುತ್ತಾ  ಹೊಸತರಲ್ಲಿದ್ದ ಮಧುರ ಅನುಭೂತಿಗಳು,ಪ್ರೀತಿ ಪ್ರೇಮದ ರಸಾನುಭವಗಳು ಕಡಿಮೆಯಾಗುತ್ತಾ ಹೋಗುತ್ತವೆ.

        ಆಕರ್ಷಕ ಕನಸುಗಳನ್ನು ಕಾಣುತ್ತಾ ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆಂದಚೆಂದ.ನಂತರ ನಿಧಾನವಾಗಿ ಕನಸಿನ ಲೋಕಕ್ಕೂ ವಾಸ್ತವದ ಬದುಕಿಗೂ ಎಷ್ಟು ಅಂತರವಿದೆ ಎನ್ನುವುದು ಅರಿವಾಗುತ್ತಾ ಹೋಗುತ್ತದೆ.ಸಾಂಸಾರಿಕ ಜಂಜಾಟಗಳು ಹೆಚ್ಚಾದಂತೆ ಸರಸ ಸಲ್ಲಾಪಗಳು ಕಡಿಮೆಯಾಗುತ್ತಾ ವಿರಸಗಳು ತಲೆದೋರುತ್ತವೆ.ಸಮಸ್ಯೆ ಸಂಕಟಗಳು ಒಂದೊಂದಾಗಿ ಬರುವಾಗ ನಿನಗೆ  ಬೇಕಿತ್ತಾ ಇದು ಎಂದೆಣಿಸುವುದುಂಟು. ಮದುವೆಯಾದ ಮೊದಲ ವರ್ಷ ಹೆಂಡತಿ ಹೇಳ್ತಾಂತೆ ಗಂಡ ಕೇಳ್ತಾನಂತೆ.ಎರಡನೆಯ ಗಂಡ ಹೇಳ್ತಾನೆ ಹೆಂಡತಿ ಕೇಳ್ತಾಳಂತೆ.ಮೂರನೆಯ ವರ್ಷ  ಇಬ್ಬರೂ ಹೇಳ್ತಾರೆ ನೆರೆಮನೆಯವರು ಕೇಳತ್ತಾರಂತೆ. ಹೀಗೆ ಸಾಂಸಾರಿಕ ಜೀವನದ ಬಗ್ಗೆ ವಿಡಂಬನೆಯ ಮಾತುಗಳೇನೆ ಇರಲಿ ಸಾರವತ್ತಾಗಿ ಸಂತೋಷದ ಸಾಂಸಾರಿಕ ಜೀವನ ನಡೆಸಿದವರು ಇದ್ದಾರೆ ಎನ್ನುವುದನ್ನು ನಾವು ಮನಗಾಣಬೇಕು.

       ವ್ಯಸನಮಯ ಸಂಸಾರದಲಿ ವಿನೋದವ ಕಾಣುವ ರಸಿಕತೆಯೆ ಹೋಗವೆಲೋ ಮಂಕುತಿಮ್ಮ ಎಂಬ ಡಿವಿಜಿಯವರ ಮಾತನ್ನರಿತು ಸಕಾರಾತ್ಮಕ ಮನೋಭಾವದೊಂದಿಗೆ ಹೊಂದಾಣಿಕೆಯಿಂದ ನಗುನಗುತ್ತಾ ಬಾಳಬೇಕು. “ಹಳತೆಲ್ಲ ಕಸವಲ್ಲ ,ಹೊಸತೆಲ್ಲ ರಸವಲ್ಲ; ಕಸರಸದ ಮಿಶ್ರಣವೊ ಹಳತು ಹೊಸತೆಲ್ಲ! ಕಸ-ರಸವ ಬೇರ್ಪಡಿಸಿ ಹೀರು ನೀ ಸವಿರಸವ; ಸಮರಸದಿ ಇದೆ ಸೊಂಪು-ಮುದ್ದುರಾಮ” ಎಂಬ ಕವಿವಾಣಿಯಂತೆ ಸಮಾಧಾನದಿಂದ ಸಾಮರಸ್ಯವನ್ನು ಕಂಡುಕೊಂಡಾಗಲೇ  ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ

ಅಧ್ಯಕ್ಷರು, ಕಸಾಪ , ಕಾರ್ಕಳ ಘಟಕ.























































































































































error: Content is protected !!
Scroll to Top