ಮಾನವ ಹಕ್ಕುಗಳ ರಕ್ಷಣಾ ಅಧಿನಿಯಮ – ಆಯೋಗಗಳ ಅಧಿಕಾರ

ಭಾರತೀಯ ಸಂವಿಧಾನದ ಮೂಲಕ ಖಾತರಿ ಪಡಿಸಲಾದ ಮತ್ತು ಅಂತರ್‌ರಾಷ್ಟೀಯ ಒಡಂಬಡಿಕೆಗಳಲ್ಲಿ ಒಳಗೊಂಡಿರುವ ಹಾಗೂ ಭಾರತ ದೇಶದ ವಿವಿಧ ನ್ಯಾಯಾಲಯಗಳಿಂದ ಜಾರಿಗೊಳಿಸಬಹುದಾದ ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆ ಇತ್ಯಾದಿ ವಿಚಾರಗಳಿಗೆ ಸಂಬಂಧಪಟ್ಟ ಪ್ರತಿಯೊಬ್ಬ ಭಾರತೀಯ ನಾಗರೀಕನ ಹಕ್ಕನ್ನು ರಕ್ಷಿಸುವ ಸುದುದ್ದೇಶದಿಂದ ಈ ಕಾನೂನನ್ನು ಭಾರತ ಸರಕಾರವು, ದಿನಾಂಕ 28-09-1993 ರಂದು ಜ್ಯಾರಿಗೊಳಿಸಿದೆ.
ಈ ಕಾನೂನಿನ ಉದ್ದೇಶವನ್ನು ಸಮರ್ಪಕವಾಗಿ ಜ್ಯಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಒಂದು ರಾಷ್ಟೀಯ ಮಾನವ ಹಕ್ಕುಗಳ ಆಯೋಗ ಹಾಗೂ ಪ್ರತಿಯೊಂದು ರಾಜ್ಯದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ರಚಿಸಿದೆ. ರಾಷ್ಟೀಯ ಮಾನವ ಹಕ್ಕುಗಳ ಆಯೋಗದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷರಾಗಿಯೂ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಥವಾ ನಿವೃತ್ತ ನ್ಯಾಯಮೂರ್ತಿ, ಹೈಕೋರ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಥವಾ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತಿಳುವಳಿಕೆಯುಳ್ಳ ಅಥವಾ ವ್ಯವಹಾರಿಕ ಅನುಭವ ಹೊಂದಿರುವ ವ್ಯಕ್ತಿಗಳ ಪೈಕಿ ಯಾರಾದರೂ ಒಬ್ಬರು ಈ ರೀತಿಯಾಗಿ ಒಬ್ಬ ಅಧ್ಯಕ್ಷ ಮತ್ತು 3 ಜನ ಸದಸ್ಯರುಗಳಿರುತ್ತಾರೆ ಮತ್ತು ಒಬ್ಬ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇರುತ್ತಾರೆ. ಮತ್ತು ಸರಕಾರದಿಂದ ನಿಯೋಜಿಸಲ್ಪಟ್ಟ
ವಿವಿಧ ಇಲಾಖೆಗಳ ಸಿಬ್ಬಂದಿಗಳಿರುತ್ತಾರೆ.
ಈ ಆಯೋಗವು ಸ್ವಯಂಪ್ರೇರಿತವಾಗಿ ಅಥವಾ ಸಂಕಷ್ಟ ಅಥವಾ ದೌರ್ಜನ್ಯಕ್ಕೊಳಗಾದ ಯಾವುದೇ ವ್ಯಕ್ತಿ ದೂರನ್ನು ಸಲ್ಲಿಸಿದಾಗ ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ದುಷ್ಪ್ರೇರಣೆ ಕುರಿತು, ಅಥವಾ ಸರಕಾರಿ ನೌಕರನಿಂದ ಅಂತಹ ಉಲ್ಲಂಘನೆಯನ್ನು ತಡೆಯುವಲ್ಲಿ ಆದ ನಿರ್ಲಕ್ಷ್ಯದ ಕುರಿತು ವಿಚಾರಣೆ ನಡೆಸುವ, ಮತ್ತು ಯಾವುದೇ ನ್ಯಾಯಾಲಯದ ಮುಂದೆ ಇತ್ಯರ್ಥಕ್ಕಾಗಿ ಬಾಕಿ ಇರುವ ಪ್ರಕರಣಗಳಲ್ಲಿ ಅಂತಹ ನ್ಯಾಯಾಲಯದ ಅನುಮತಿ ಮೇರೆಗೆ ಮಧ್ಯ ಪ್ರವೇಶಿಸುವ ಮತ್ತು ರಾಜ್ಯ ಸರಕಾರದ ನಿಯಂತ್ರಣದಲ್ಲಿರುವ ಯಾವುದೇ ಇತರ ಸಂಸ್ಥೆಯಲ್ಲಿ ಚಿಕಿತ್ಸೆ, ಸುಧಾರಣೆ ಅಥವಾ ರಕ್ಷಣಾ ಉದ್ದೇಶಗಳಿಗಾಗಿ ಬಂಧಿಸಿಟ್ಟಿರುವ ಅಥವಾ ತಡೆಹಿಡಿದಿಟ್ಟಿರುವ ವ್ಯಕ್ತಿಗಳ ಜೀವನದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಮತ್ತು ಈ ಬಗ್ಗೆ ಸೂಕ್ತ ಶಿಫಾರಸುಗಳನ್ನು ಮಾಡಲು ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿ ಅಂತಹ ಜೈಲು ಅಥವಾ ಸಂಸ್ಥೆಗೆ ಭೇಟಿ ನೀಡುವ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನದಲ್ಲಿ ಅಥವಾ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಒದಗಿಸಲಾದ ರಕ್ಷಣಾ ಕ್ರಮಗಳನ್ನು ಪರಿಶೀಲಿಸುವ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೇಕಾದ ಕ್ರಮಗಳನ್ನು ಶಿಫಾರಸು
ಮಾಡುವ ಮತ್ತು ಮಾನವ ಹಕ್ಕುಗಳನ್ನು ಅನುಭವಿಸಲು ಅಡ್ಡಿ ಉಂಟು ಮಾಡುವ ಭಯೋತ್ಪಾದಕ ಕೃತ್ಯಗಳೂ ಸೇರಿದಂತೆ ಅಂತಹ ವಿಷಯಗಳನ್ನು ಪರಿಶೀಲಿಸುವ ಮತ್ತು ಈ ಬಗ್ಗೆ ಸೂಕ್ತ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡುವ, ಮತ್ತು ಮಾನವ ಹಕ್ಕುಗಳಿಗೆ ಸಂಬದಿಸಿದ ವಿಚಾರಗಳ ಬಗ್ಗೆ ಅಧ್ಯಯನ ಮಾಡಿ ಪರಿಣಾಮಕಾರಿಯಾಗಿ ಜ್ಯಾರಿಗೊಳಿಸಲು ಬೇಕಾಗುವ ಶಿಫಾರಸುಗಳನ್ನು
ಮಾಡುವ ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಅಭಿವೃದ್ಧಿಗೊಳಿಸುವ ಮತ್ತು ಸಮಾಜದ ವಿವಿಧ ವರ್ಗಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ವಿವಿಧ ಪ್ರಕಟಣೆ, ಮಾಧ್ಯಮ, ವಿಚಾರಗೋಷ್ಠಿ ಮತ್ತು ಲಭ್ಯವಿರುವ ಇತರ ಸಾಧನಗಳ ಮೂಲಕ ಈ ಹಕ್ಕುಗಳ ರಕ್ಷಣೆಗಾಗಿ ಲಭ್ಯವಿರುವ ಸುರಕ್ಷಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯ‌ನಿರತರಾಗಿರುವ ಸರ್ಕಾರೇತರ ಸಂಘಟಣೆಗಳ ಮತ್ತು ಸಂಸ್ಥೆಗಳ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಮತ್ತು ಅವಶ್ಯಕವೆಂದು ಭಾವಿಸುವ ಇತರ ಕಾರ್ಯಗಳನ್ನು ನಿರ್ವಹಿಸುವ ಕಾನೂನುಬದ್ಧ ಅದ್ಧಿಕಾರವನ್ನು ಹೊಂದಿರುತ್ತದೆ.
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಅಧ್ಯಕ್ಷರಾಗಿ, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ, ಕಾರ್ಯನಿರ್ವಹಿಸುವ ಅಥವಾ ಜಿಲ್ಲಾ ನ್ಯಾಯಾಧೀಶ, ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತಿಳುವಳಿಕೆಯುಳ್ಳ ಅಥವಾ ವ್ಯವಹಾರಿಕ ಅನುಭವ ಹೊಂದಿರುವ ವ್ಯಕ್ತಿಗಳ ಪೈಕಿ ಯಾರಾದರೂ ಒಬ್ಬರು ಈ ರೀತಿಯಾಗಿ ಒಬ್ಬ ಅಧ್ಯಕ್ಷ ಮತ್ತು 3 ಜನ ಸದಸ್ಯರುಗಳಿರುತ್ತಾರೆ. ಒಬ್ಬ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇರುತ್ತಾರೆ.
ಕೇಂದ್ರ ಮತ್ತು ರಾಜ್ಯ ಮಾನವ ಹಕ್ಕು ಆಯೋಗಗಳು ಮಾನವ ಹಕ್ಕುಗಳ ಉಲ್ಲಂಘನೆಯ ದೂರುಗಳ ಬಗ್ಗೆ ವಿಚಾರಣೆ ನಡೆಸುವಾಗ ಕೇಂದ್ರ ಅಥವಾ ರಾಜ್ಯ ಸರಕಾರದ ಅಥವಾ ಅದರ ಪ್ರಾಧಿಕಾರದಿಂದ ಅಥವಾ ಸಂಸ್ಥೆಯಿಂದ ಮಾಹಿತಿಯನ್ನು ತರಿಸಿಕೊಳ್ಳುವ ಅಥವಾ ಗೊತ್ತುಪಡಿಸಿದ ಸಮಯದ ಒಳಗಾಗಿ ಮಾಹಿತಿ ಅಥವಾ ವರದಿಯು ಬಾರದೆ ಇದ್ದಲ್ಲಿ ತಾನೇ ಸ್ವತಃ ದೂರಿನ ವಿಚಾರಣೆ ನಡೆಸುವ ಮತ್ತು ದೂರಿನ ಸ್ವರೂಪವನ್ನು ಮತ್ತು ವರದಿಯನ್ನು ಗಮನಿಸಿ ಸೂಕ್ತ ಆದೇಶ ಮಾಡುವ, ಸರಕಾರಿ ನೌಕರನು(ಲೋಕನೌಕರ) ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಅಥವಾ ಉಲ್ಲಂಘನೆಯನ್ನು ತಡೆಯುವಲ್ಲಿ ನಿರ್ಲಕ್ಷ್ಯ ತೋರಿರುವ ಅಂಶವು ವಿಚಾರಣೆಯಿಂದ ಕಂಡುಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಅಗತ್ಯವಿರುವ ಪ್ರಾಸಿಕ್ಯೂಷನ್ ವ್ಯವಹರಣೆಗಳನ್ನು ದಾಖಲಿಸುವಂತೆ ಅಥವಾ ಇತರ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಅಥವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡುವ ಮತ್ತು ಸೂಕ್ತ ನಿರ್ದೇಶನಗಳಿಗಾಗಿ ಸರ್ವೋಚ್ಚ ನ್ಯಾಯಾಲಯ ಅಥವಾ ಹೈಕೋರ್ಟನ್ನು ಸಂಪರ್ಕಿಸುವ ಮತ್ತು ಸಂಕಷ್ಟಕ್ಕೊಳಗಾದ ವ್ಯಕ್ತಿಗೆ ಅಥವಾ ಅವನ ಕುಟುಂಬದ ಸದಸ್ಯರಿಗೆ ಆಯೋಗವು ಅವಶ್ಯವೆಂದು ಪರಿಗಣಿಸಬಹುದಾದಂಥ ತತ್‍ಕ್ಷಣ ಒದಗುವ ಮಧ್ಯಕಾಲೀನ ಪರಿಹಾರವನ್ನು ಮಂಜೂರು ಮಾಡುವ ಅಧಿಕಾರವನ್ನು ಹೊಂದಿರುತ್ತದೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 9611682681





























































































































































































































error: Content is protected !!
Scroll to Top