ಯಕ್ಷಾಂಕಣ- ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ

” ಪಾರ್ತಿಸುಬ್ಬ ” ಎಂಬ ಹೆಸರು ಯಕ್ಷಗಾನ ಅಭಿಮಾನಿಗಳಿಗೆ ಪ್ರಾತಃಸ್ಮರಣೀಯವಾದುದು .
ಕರಾವಳಿಯ ಗಂಡು ಕಲೆ ಎಂಬ ನೆಗಳ್ತೆಗೆ ಪಾತ್ರವಾದ ಯಕ್ಷಗಾನ ಕಲೆಯನ್ನು ಅಮೂಲಾಗ್ರ ಸುಧಾರಣೆ ಮಾಡಿ , ಆ ಮೂಲಕ ಇಂದು ಯಕ್ಷಗಾನ ” ವಿಶ್ವವ್ಯಾಪಿ ” ಯಾಗಲು ಮೂಲ ಕಾರಣರಾದುದು ಪಾರ್ತಿಸುಬ್ಬರು ಎಂಬುದು ನಿರ್ವಿವಾದ . ಇಂದು ಯಕ್ಷಗಾನವು ಸಾಗರದ ಸೀಮೋಲ್ಲಂಘನ ಮಾಡಿದೆ . ಯಕ್ಷಗಾನ ಅತ್ಯಂತ ವೈಭವದ ಸ್ಥಿತಿಯಲ್ಲಿರುವ ಈ ಕಾಲಘಟ್ಟದಲ್ಲಿ ಯಕ್ಷಗಾನ ಕಲೆಯ ಬೆಳವಣಿಗೆಗೆ ಕಾರಣರಾದ ಪಾರ್ತಿಸುಬ್ಬರ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಈ ಲೇಖನದ್ದು .
ವಿದ್ವಾಂಸರಾದ ಮುಳಿಯ ತಿಮ್ಮಪ್ಪಯ್ಯರಿಂದ ” ಯಕ್ಷಗಾನದ ನಾಡೋಜ ” ಎಂದು ಹೊಗಳಲ್ಪಟ್ಟ ಪಾರ್ತಿಸುಬ್ಬ ಕಾಸರಗೋಡು ತಾಲ್ಲೂಕಿನ ಕುಂಬಳೆಯವರು . ಸ್ಥಾನಿಕ ಬ್ರಾಹ್ಮಣ ವರ್ಗದಲ್ಲಿ ಜನಿಸಿದ ಸುಬ್ಬ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪಾಟಾಳಿಯಾಗಿದ್ದರು . ಇವರ ಜೀವಿತದ ಕಾಲಮಾನ ಸುಮಾರು ಕ್ರಿ.ಶ. 1600 ರಿಂದ ಕ್ರಿ.ಶ.1700 ಇರಬಹುದು ಎಂಬುದು ಒಂದು ಅಭಿಪ್ರಾಯವಾದರೆ , ಕ್ರಿ.ಶ. 1760 ರಿಂದ ಕ್ರಿ.ಶ.1830 ಎಂಬುದಾಗಿ ಮಂಜೇಶ್ವರ ಗೋವಿಂದ ಪೈ , ಮುಳಿಯ ತಿಮ್ಮಪ್ಪಯ್ಯ , ವೆಂಕಪ್ಪ ಶೆಟ್ಟಿ , ಕುಕ್ಕಿಲ ಕೃಷ್ಣ ಭಟ್ ಮುಂತಾದ ಸಂಶೋಧಕರ ಅಭಿಪ್ರಾಯವೂ ಇದೆ . ಸುಬ್ಬನ ತಾಯಿಯ ಹೆಸರು ಪಾರ್ವತಿ (ಪಾರ್ತಿ). ಆಕೆಯಿಂದಲೇ ಈತನಿಗೆ ” ಪಾರ್ತಿಸುಬ್ಬ ” ಎಂಬ ಹೆಸರು ಬಂತು ಎಂಬುದು ಹಿರಿಯ ವಿದ್ವಾಂಸರ ಹಾಗೂ ಸಂಶೋಧಕರ ಅಭಿಪ್ರಾಯ . ಕುಂಬಳೆ ಪೇಟೆಯ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪಕ್ಕದಲ್ಲೇ ಪಾರ್ತಿಸುಬ್ಬರ ತಂದೆಯ ಮನೆ ಇದ್ದು , ಕಣಿಪುರದ ಶ್ರೀ ಗೋಪಾಲಕೃಷ್ಣ ದೇವರು ಕುಂಬಳೆ ಅರಸರ ಕುಲದೇವರು . ಸುಬ್ಬರ ಎಲ್ಲಾ ಕೃತಿಗಳಲ್ಲೂ ಕಣಿಪುರ ಕೃಷ್ಣ ಅಥವಾ ಕಣ್ವಪುರೇಶನ ಅಂಕಿತವಿದೆ . ಕಣಿಪುರಕ್ಕೆ ಸಮೀಪ ಪುರಾಣ ಪ್ರಸಿದ್ಧವಾದ ಮದವೂರು ಮಹಾ ಗಣಪತಿಯ ದೇವಸ್ಥಾನವಿದೆ . ಪಾರ್ತಿಸುಬ್ಬ ಮದವೂರು ಗಣಪತಿಯ ಪರಮ ಭಕ್ತರಾಗಿದ್ದರು . ಇವರು ಒಂದು ಶುಭ ಮುಹೂರ್ತದಲ್ಲಿ ಮದವೂರು ದೇವಸ್ಥಾನಕ್ಕೆ ಶುಚಿರ್ಭೂತನಾಗಿ ಬಂದು ಮಹಾಗಣಪತಿ ದೇವರಿಗೆ ಪ್ರಿಯವಾದ ಅಪ್ಪ ನೈವೇದ್ಯ , ಪಂಚಕಜ್ಜಾಯ ಪೂಜೆ ನೆರವೇರಿಸಿ
” ಮುದದಿಂದ ನಿನ್ನಾ ಕೊಂಡಾಡುವೆನು ಅನವರತ | ಮದವೂರ ವಿಘ್ನೇಶ ದೇವ ಜಗದೀಶ “
ಎಂಬ ಪದ್ಯ ಬರೆದು ಅದನ್ನು ನಾಟಿ ರಾಗ , ಝಂಪೆ ತಾಳದಲ್ಲಿ ಹಾಡಿ ಪ್ರಸಂಗ ರಚನೆಗೆ ತೊಡಗಿದರು . ಈ ಪದ್ಯವೇ ಯಕ್ಷಗಾನದ ಮೂಲ ಪದ್ಯವೆಂದು ಗುರುತಿಸಿಕೊಂಡಿದೆ . ಇಂದಿಗೂ ಯಕ್ಷಗಾನದ ಪ್ರಾರಂಭದಲ್ಲಿ ಗಣಪತಿಯನ್ನು ಸ್ತುತಿಸುವ ಪದ್ಯ ಇದೇ ಆಗಿದೆ . ಪಾರ್ತಿಸುಬ್ಬ ರಚಿಸಿದ ಯಕ್ಷಗಾನ ಪ್ರಸಂಗಗಳಲ್ಲಿ ಹಾಗೂ ಯಕ್ಷಗಾನದ ಪೂರ್ವರಂಗ ಪ್ರಯೋಗದಲ್ಲಿ ಮದವೂರ ಗಣಪತಿ ದೇವರ ಸ್ತುತಿ ಧಾರಾಳವಾಗಿ ಇರುವುದನ್ನು ಗಮನಿಸಬಹುದು . ಇವರು ಕೇರಳದಲ್ಲಿ ವಿದ್ಯಾಭ್ಯಾಸ ಮಾಡಿದರೆಂದೂ ಕೆಲ ಸಮಯ ಅಲ್ಲಿಯ ಕಥಕಳಿಯಲ್ಲಿ ಭಾಗವತರಾಗಿದ್ದರೆಂದೂ ಅನಂತರ ಕನ್ನಡ ಯಕ್ಷಗಾನಗಳನ್ನು ರಚಿಸಿ ಕುಂಬಳೆಯ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದ ಕುಂಬಳೆ ದಶಾವತಾರ ಮೇಳವನ್ನು ಸ್ಥಾಪಿಸಿ ಭಾಗವತರಾಗಿದ್ದರು ಎಂಬ ಐತಿಹ್ಯವಿದೆ .
ಯಕ್ಷಗಾನ ಪ್ರಯೋಗವನ್ನು ಶಾಸ್ತ್ರೀಯವಾಗಿ ಸಂಸ್ಕರಿಸಿ ತೆಂಕಮಟ್ಟು ಎಂಬ ಯಕ್ಷಗಾನ ಪದ್ಧತಿಯನ್ನು ರೂಢಿಸಿ , ಸಮಗ್ರ ರಾಮಾಯಣದ ಕಥೆಯನ್ನು ಯಕ್ಷಗಾನ ಪ್ರಸಂಗಗಳ ರೂಪದಲ್ಲಿ ರಚಿಸಿದವರಲ್ಲಿ ಪಾರ್ತಿಸುಬ್ಬ ಮೊದಲಿಗರು . ಪುತ್ರಕಾಮೇಷ್ಟಿ , ಸೀತಾ ಸ್ವಯಂವರ, ಶ್ರೀರಾಮ ಪಟ್ಟಾಭಿಷೇಕ, ಪಂಚವಟಿ , ವಾಲಿ ಸಂಹಾರ, ಉಂಗುರ ಸಂಧಿ, ಸೇತು ಬಂಧನ, ಅಂಗದ ಸಂಧಾನ, ಕುಂಭಕರ್ಣ ಕಾಳಗ, ಕುಶಲವರ ಕಾಳಗ , ಐರಾವತ ಇವಲ್ಲದೆ ಶ್ರೀಕೃಷ್ಣ ಬಾಲಲೀಲೆ , ಕೃಷ್ಣಜನನ , ಗೋಪಿ ವಸ್ತ್ರಾಪಹರಣದವರೆಗಿನ ಕಥಾಭಾಗವನ್ನು” ಕೃಷ್ಣಚರಿತೆ ” ಎಂಬ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು ಪಾರ್ತಿಸುಬ್ಬರೇ . ಕೃಷ್ಣಚರಿತೆ ಪ್ರಸಂಗದಲ್ಲಿ ಬ್ರಹ್ಮದೇವನು ಕೊರವಂಜಿಯ ರೂಪದಲ್ಲಿ ಬಂದು ದೇವಕಿಗೆ ಶ್ರೀಕೃಷ್ಣ ಜನನದ ಬಗ್ಗೆ ಕಣಿ ಹೇಳುವ ಭಾಗವೂ ಇದೆ . ಈ ಪ್ರಸಂಗಗಳು ಇವತ್ತಿಗೂ ಯಕ್ಷರಂಗದಲ್ಲಿ ಪ್ರಯೋಗ ಆಗುತ್ತಿವೆ .ಪಾರ್ತಿಸುಬ್ಬರ ಯಕ್ಷಗಾನ ಪ್ರಸಂಗಗಳು ಜೈಮಿನಿ ಭಾರತ , ತೊರವೆ ರಾಮಾಯಣ , ಕೃಷ್ಣ ಚರಿತೆಗಳಿಂದ ಪ್ರಭಾವಿತಗೊಂಡಿವೆ .

ಯಕ್ಷಗಾನದ ಪೂರ್ವರಂಗಕ್ಕೆ ಸಂಬಂಧಿಸಿದಂತೆ ಇವರು ರಚಿಸಿದ. ” ಸಭಾಲಕ್ಷಣ ” ಯಕ್ಷಗಾನದ ಅಮೂಲ್ಯ ಗ್ರಂಥಪಾಠ ಎನಿಸಿಕೊಂಡಿದೆ .ಇದು ಯಕ್ಷಗಾನದ ಮೂಲಪಾಟವೂ ಆಗಿದೆ . ಇವರ ರಾಮಾಯಣದ ಕೃತಿಗಳು ಯಕ್ಷಗಾನ ಸಾರಸ್ವತ ಪ್ರಪಂಚದಲ್ಲಿ ಅತ್ಯುತ್ತಮ ಕೃತಿಗಳೆಂದು ಪ್ರಸಿದ್ಧವಾಗಿವೆ. ಅವುಗಳಲ್ಲಿ ಕೆಲವನ್ನು ವೆಂಕಯ್ಯ ಭಾಗವತ ಎಂಬುವರು ತುಳುವಿಗೆ ಭಾಷಾಂತರಿಸಿದ್ದಾರೆ . ಇವರೇ ತುಳು ಭಾಷೆಯಲ್ಲಿ ರಚಿಸಿದ್ದ ಕೆಲವು ಬಿಡಿಪದ್ಯಗಳು ದೊರೆಯುತ್ತವೆ . ತನ್ನ ಐರಾವತ ಪ್ರಬಂಧದಲ್ಲಿ ತುಳು , ಮಲಯಾಳ, ಕೊಂಕಣಿ, ಮರಾಠಿ, ತೆಲುಗು ಭಾಷೆಗಳಲ್ಲಿ ಸಹ ಇವರು ಕೆಲವು ಪದ್ಯಗಳನ್ನು ರಚಿಸಿದ್ದಾರೆ .
ಯಕ್ಷಗಾನ ಎಂಬ ದೈವಿಕ ಕಲೆಯನ್ನು ಪುನರುಜ್ಜೀವನಗೊಳಿಸಿದ ಪಾರ್ತಿಸುಬ್ಬ ಯಕ್ಷಗಾನ ತರಬೇತಿ ಶಾಲೆಯನ್ನು ಆರಂಭಿಸಿ ಭರತ ನಾಟ್ಯ , ಯಕ್ಷಗಾನದ ಹೆಜ್ಜೆಗಳನ್ನೂ ಆಸಕ್ತರಿಗೆ ಕಲಿಸುವ ವ್ಯವಸ್ಥೆ ಮಾಡಿದರು . ನಂತರ ಕುಂಬ್ಳೆ ಮೇಳವನ್ನೂ ಹೊರಡಿಸಿ ಯಕ್ಷಗಾನದ ಪ್ರಚಾರಕ್ಕಾಗಿ ಶ್ರಮಿಸಿದ್ದರು . ಅವರೇ ಸ್ವತಃ ಭಾಗವತರಾಗಿ , ನಿರ್ದೇಶನವನ್ನೂ ನೀಡುತ್ತಿದ್ದರು . ಆ ಕಾರಣಕ್ಕಾಗಿಯೇ ಇಂದೂ
” ಭಾಗವತರೇ ಯಕ್ಷಗಾನದ ನಿರ್ದೇಶಕರು ” ಎಂಬ ಮಾತು ಚಾಲ್ತಿಯಲ್ಲಿರಬಹುದೇನೋ ?
ಪಾರ್ತಿ ಸುಬ್ಬರ ವಂಶಸ್ಥರಾದ ವೆಂಕಟೇಶಯ್ಯ ಎಂಬವರ ಕುಟುಂಬದವರು ಈಗಲೂ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ನಾರಂಪಾಡಿ ಎಂಬಲ್ಲಿ ನೆಲೆಸಿದ್ದಾರೆ . ಕರ್ನಾಟಕ ಸರಕಾರವು ಪಾರ್ತಿಸುಬ್ಬರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಪರಂಪರೆ ಉಳಿಸಿಕೊಂಡಿದೆ . ಇದು ಒಂದು ಲಕ್ಷ ರೂಪಾಯಿ ನಗದು ಹಾಗೂ ” ಪಾರ್ತಿಸುಬ್ಬ ಪ್ರಶಸ್ತಿ ” ಹೊಂದಿದ್ದು , ಯಕ್ಷಗಾನದ ಮಟ್ಟಿಗೆ ಶ್ರೇಷ್ಠ ಪ್ರಶಸ್ತಿಯಾಗಿದೆ . ಅಮೃತ ಸೋಮೇಶ್ವರ , ಹೊಸ್ತೋಟ ಮಂಜುನಾಥ ಭಾಗವತರು , ಕಡತೋಕ ಮಂಜುನಾಥ ಭಾಗವತರು , ಡಾ.ಶಿಮಂತೂರು ನಾರಾಯಣ ಶೆಟ್ಟಿ , ಡಾ.ಪ್ರಭಾಕರ ಜೋಷಿ , ತಿಮ್ಮಾ ರೆಡ್ಡಿ , ಎಂ.ಆರ್.ರಂಗನಾಥ ರಾವ್ , ಜಿ.ಎಸ್.ಭಟ್ , ಬಲಿಪ ನಾರಾಯಣ ಭಾಗವತರು , ಬಂಗಾರಾಚಾರಿ ಮುಂತಾದವರು ಈ ಪ್ರಶಸ್ತಿಯನ್ನು ಗಳಿಸಿದ ಸಾಧಕರಾಗಿದ್ದಾರೆ . ‌2019 ರ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಯು ಕಾರ್ಕಳ ತಾಲೂಕಿನ ಅಂಬಾತನಯ ಮುದ್ರಾಡಿಯವರಿಗೆ ಒಲಿದಿದೆ .
ಎಂ‌.ಶಾಂತರಾಮ ಕುಡ್ವ, ಮೂಡಬಿದಿರೆ















































































































































error: Content is protected !!
Scroll to Top