ಕಾರ್ಕಳ : ಪ್ರೇಮಿಗಳ ದಿನದ ಬಗ್ಗೆ ಯುವ ಕಾಂಗ್ರೆಸ್‌ನ ಮುಖಂಡರು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅಲ್ಲದೆ ಈ ಬಗ್ಗೆ ವಿಶೇಷವಾಗಿ ಎಲ್ಲಾ ಹಿಂದೂಗಳು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಕಳ ತಾಲೂಕು ಸಂಯೋಜಕ ಸುಜಿತ್ ಸಪಲಿಗ ಹೇಳಿದ್ದಾರೆ.
ಕಾಂಗ್ರೆಸ್‌ನ ಮನಸ್ಥಿತಿಯೇ ಹಾಗೆ. ಸ್ವಾತಂತ್ರ್ಯ ಬಂದಾಗಿನಿಂದ ಜಾತಿಯ ಹೆಸರಿನಲ್ಲಿ ಎಲ್ಲಾ ಹಿಂದೂಗಳನ್ನು ಒಡೆದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ. ಈಗ ನಮ್ಮ ಸುಸಂಸ್ಕೃತ ಆಚಾರ ವಿಚಾರಗಳನ್ನು ನಾಶಪಡಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಹೇರುವ ಹೀನ ಕೃತ್ಯಕ್ಕೆ ಕೈ ಹಾಕಿ ಹಿಂದೂಗಳಲ್ಲಿ ಇನ್ನಷ್ಟು ಒಡಕು ಮೂಡಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿರುವ ಸುಜಿತ್ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಮಾತ್ರವಲ್ಲದೆ ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದರೆ ಅದಕ್ಕೆ ನೇರವಾಗಿ ಯುವ ಕಾಂಗ್ರೆಸ್ ಕಾರಣವಾಗುತ್ತದೆ. ಆದ್ದರಿಂದ ಇಂತಹ ಉದ್ದಟತನದ ಮಾತುಗಳನ್ನು ಇಲ್ಲಿಗೆ ನಿಲ್ಲಿಸಿ ಅಥವಾ ಮುಂಬರುವ ದಿನಗಳಲ್ಲಿ ಸಂಭವಿಸುವ ಪ್ರತಿಭಟನೆ ಎದುರಿಸಲು ಸಜ್ಜಾಗಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.



















