ಸರಳ ಮಾತು-ಮನಸ್ಸಿನ ಪಾಲ್ತಾಡಿ

ಕಾರ್ಕಳ : ಸುಮಾರು 20 ವರ್ಷಗಳ ಹಿಂದಿನ ಮಾತು. ಅಕ್ಷರಶಿಲ್ಪಿ ಅನಂತಾಚಾರ್ ಕುರಿತು ಪಾಲ್ತಾಡಿ ರಾಮಕೃಷ್ಣ ಆಚಾರ್ ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದಿತ್ತು. ಪುಸ್ತಕ ಪರಿಚಯಿಸುವ ಕೆಲಸ ನನ್ನದೇ ಆಗಿತ್ತು. ಹಿರಿಯ ಕವಿ ಪ್ರೊಫೆಸರ್ ಅಮೃತ ಸೋಮೇಶ್ವರರು ಅಲ್ಲಿ ಮುಖ್ಯ ಅತಿಥಿ. ಪ್ರಾಸಂಗಿಕವೋ ಅಧಿಕ ಪ್ರಸಂಗವೋ ಅಲ್ಲಿ ಒಂದು ಮಾತು ಹೇಳಿದ್ದೆ.

  ʼಅನೇಕ ಕಾರಣಗಳಿಗಾಗಿ ಅಮೃತರು ಮತ್ತು ಪಾಲ್ತಾಡಿ ಅಣ್ಣ ತಮ್ಮಂದಿರಂತೆ ಕಾಣುತ್ತಾರೆ. ಅವರ ಅಧ್ಯಯನದ ಆಸಕ್ತಿ ಎಲ್ಲವೂ ಒಂದೇ. ಅಷ್ಟೇ ಅಲ್ಲ ಅವರ ದೈಹಿಕ ಚಹರೆಯು ಹೆಚ್ಚು ಕಡಿಮೆ ಒಂದೇ ರೀತಿ. ಮೃದುತ್ವವು ಕೂಡ. ಸಮಾನ ಭಾವವೂ...ʼ ಮುಂದಿನ ಮುಖ್ಯ ಭಾಷಣ ಅಮೃತರದ್ದೇ ಆಗಿತ್ತು. ಅವರು ನನ್ನ ಮಾತನ್ನು ಉಲ್ಲೇಖಿಸಿ ʼಅಧ್ಯಯನದ ವಿಷಯದಲ್ಲಿ ಪಾಲ್ತಾಡಿ  ನನ್ನನ್ನು ಮೀರಿದವರು. ಆ ಮಟ್ಟಿಗೆ ಅವರು ನನಗೆ ಅಣ್ಣʼ ಎಂದರು.  ಇದು ಅಮೃತರ ದೊಡ್ಡತನ.

ಆದರೆ ಆ ಕ್ಷಣ ಪಾಲ್ತಾಡಿಯವರ ಮುಖ ನೋಡಬೇಕಿತ್ತು. ಯಾವುದೋ ಒಂದು ಅವ್ಯಕ್ತ ನೋವು ಅವರನ್ನು ಕಾಡಿದಂತೆ ಇತ್ತು. ನನಗೆ ಗೊತ್ತಿರುವಂತೆ ಪಾಲ್ತಾಡಿ ಈ ಕ್ಷಣದವರೆಗೂ ಅಮೃತರನ್ನು ಅಣ್ಣ ಎಂದು ತಿಳಿದವರು ಅವರೊಬ್ಬರಲ್ಲ ಪ್ರತಿಭಾವಂತರು ಹಿರಿಯರು ಯಾರೇ ಇರಲಿ ಅವರಿಗೆ ಮೊದಲ ಗೌರವ. ಶಿಷ್ಯರನ್ನು ಕೂಡ ಮಿತ್ರರಂದೇ ಕಾಣುವ, ಎಲ್ಲವನ್ನೂ ಸತ್ಯವೆಂದು ತಿಳಿಯುವ ಪಾಲ್ತಾಡಿ ಅವರ ಪ್ರೀತಿ ಕೆಲವೊಮ್ಮೆ ಅವರ ಸಾಧ್ಯತೆಯೂ ಹೌದು ಮಿತಿಯೂ ಹೌದು. 

ಹೀಗೆ ತೀರ ಸರಳವಾಗಿ ಬಿಡುವ ಪಾಲ್ತಾಡಿ ಬಹಳಷ್ಟು ಸಂದರ್ಭದಲ್ಲಿ ಬುದ್ಧಿಜೀವಿಗಳ ಗುಂಪಿನಲ್ಲಿ ಕಳೆದುಹೋದಂತೆ ಇದ್ದವರು. ಅವರು ಎಂದಿಗೂ ಸಾಹಿತ್ಯಿಕ ಪರಿಭಾಷೆಯಲ್ಲಿ ಮಾತನಾಡಿದವರಲ್ಲ. ವಿಷಯಗಳನ್ನು ಬೇರೆಯವರ ಗಮನಕ್ಕಿಂತ ಹೃದಯಕ್ಕೆ ತರಬೇಕೆಂದು ಬಯಸಿದವರು. ಅವರ ಮನಸ್ಸಿನಂತೆ ಮಾತು ಕೂಡ ಸರಳ. ಎಳೆಎಳೆಯಾಗಿ ಬರೆದವರು, ಮಾತನಾಡಿದವರು. ಕೆಲವೊಮ್ಮೆ ಮಾತನಾಡುವವರನ್ನು ಬರೆಯುವವರನ್ನೆಲ್ಲ ಹುಡುಕಿ ಹುಡುಕಿ ಎಳೆದೆಳೆದು ವೇದಿಕೆಗೆ ಹತ್ತಿಸಿದವರು. ಪ್ರೊಫೆಸರ್ ಬಿ.ಎ ವಿವೇಕ ರೈ ಅವರು ತುಳು ಅಕಾಡೆಮಿಗೆ ಅಧ್ಯಕ್ಷರಾಗಿದ್ದಾಗ ಪಾಲ್ತಾಡಿ  ಅವರು ರಿಜಿಸ್ಟರ್ ಆಗಿ' ರೈ - ಪಾಲ್ತಾಡಿ' ಜೋಡಿ ಮಾಡಿರುವ ಸಾಧನೆ ಇವತ್ತಿಗೂ ಮಾದರಿಯೇ.

 ಅಕಾಡೆಮಿಯು ಚಾವಡಿಯಿಂದ ಹೊರಗೆ ಬಂದು ಹಳ್ಳಿಹಳ್ಳಿಗಳಿಗೆ, ತುಳುವರು ಇರುವ ರಾಜ್ಯ, ದೇಶಗಳಿಗೆ ನುಗ್ಗಿದ್ದು ಆವಾಗಲೇ. ನಲಿಕೆ ಜನಾಂಗದ ಅಧ್ಯಯನ ಒಂದೇ ಅಲ್ಲ, ಶೋಷಿತ  ಅಸಂಘಟಿತರಾಗಿದ್ದ ಅಂತಹ ಸಮಾಜವನ್ನು ಸಂಘಟಿತರನ್ನಾಗಿ ಮಾಡಿದ್ದು, ಗುತ್ತು ಮನೆ ಅಂಗಳಕ್ಕೆ ಸೀಮಿತವಾಗಿದ್ದ ದೈವ ಸಂಸ್ಕೃತಿ ಕಲೆ ನೃತ್ಯಗಳನ್ನು ರಾಜ್ಯ, ರಾಷ್ಟ್ರಮಟ್ಟದ ವೇದಿಕೆಗೆರಿಸಿದ್ದು, ತುಳುನಾಡಿನ ಕೆಡ್ಡಸ, ಆಟಿ, ಬಿಸು ಉತ್ಸವಗಳನ್ನು ಶೈಕ್ಷಣಿಕ ಪರಿಸರದಲ್ಲಿ ಸಾರ್ವತ್ರಿಕ ಗೊಳಿಸಿದ್ದು...ಈ ವಿಷಯದಲ್ಲಿ ಪಾಲ್ತಾಡಿ ಅವರು ಹಿಡಿದ ದಾರಿ, ಹಠ, ಶಿಸ್ತು ಗಮನೀಯ.

ನನ್ನೂರು ದೇರ್ಲ ಮತ್ತು ಪಾಲ್ತಾಡಿ ಬಹಳ ಹತ್ತಿರದ ಹಳ್ಳಿಗಳು. ಈ ದೇಶದ ಎಲ್ಲ ಊರುಗಳ ಹಾಗೆಯೇ ಶ್ರಮ ಬೆವರು ದುಡಿಮೆಗೆ ಹೆಸರುವಾಸಿಯಾದದ್ದು. ಪಾಲ್ತಾಡಿಯವರು ಒಂದಷ್ಟು ದಿನದ ಮಟ್ಟಿಗೆ ನನ್ನ ಗುರುಗಳು ಹೌದು. ಅವರು ಏರಿದ ಎತ್ತರವನ್ನು ಹತ್ತಿರದಿಂದ ಕಂಡ ಶಿಷ್ಯನಾಗಿ ಸಂಭ್ರಮಿಸಿದವನು ನಾನು. ಜೊತೆಗೆ ಅವರ ಕಷ್ಟಗಳನ್ನು ಕಂಡು ಮರುಗಿದವನು ಕೂಡ. ಅವರೊಂದಿಗೆ ಜಾನಪದ ಸಾಹಿತ್ಯದ ಬಗ್ಗೆ ಚರ್ಚಿಸಿದ್ದೇನೆ. ಲಘುವಾಗಿ ಹರಟಿದ್ದೇನೆ. ನಿವೃತ್ತಿಯ ಅಂಚಿನಲ್ಲಿ ಅವರು ಪಿಎಚ್‌.ಡಿಯಲ್ಲಿ ತೊಡಗಿಕೊಂಡಾಗ ಬೆರಗಾಗಿದ್ದೇನೆ.

 ಸುಮಾರು 60 ವರ್ಷಗಳ ಹಿಂದೆ ಪಾಲ್ತಾಡಿ ವೃತ್ತಿಯಲ್ಲಿ ಮೇಷ್ಟ್ರಾಗಿದ್ದ ನಮ್ಮೂರ ಶಾಲೆಗೆ ಚುನಾವಣಾಧಿಕಾರಿಯಾಗಿ ಬಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಅಮೃತ ಸೋಮೇಶ್ವರ ಅಲ್ಲೇ ಶಿಕ್ಷಕರಾಗಿದ್ದ ರಾಮಕೃಷ್ಣ ಆಚಾರ್ ಅವರನ್ನು ಮಾತನಾಡಿಸಿದ್ದು, ಆ ಮೂಲಕ ಪಾಲ್ತಾಡಿ ಅವರು ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡದ್ದು ಮುಂದೆ ಅವರು ಸಾಂಸ್ಕೃತಿಕ ಶೈಕ್ಷಣಿಕ ಸಾಹಿತಿಕವಾಗಿ ಬಹಳಷ್ಟು ಸಾಧಿಸಿದ್ದು... ಎಲ್ಲವೂ ಗಮನೀಯವಾದದ್ದು.

ಇತ್ತೀಚೆಗಷ್ಟೇ ನಾವು ಮೃದು ಮಧುರ ಭಾವದ ಬಹಳ ಎತ್ತರದ  ಲೇಖಕ ಜಾನಪದ ಸಂಶೋಧಕ ಅಮೃತರನ್ನು ಕಳೆದುಕೊಂಡೆವು. ಇದೀಗ ಪಾಲ್ತಾಡಿಯವರ ಇಲ್ಲವಾಗಿದ್ದಾರೆ. ಪಾಲ್ತಾಡಿಯವರ ಬದುಕಿನ ಆದರ್ಶವನ್ನು ಮೈಗೂಡಿಸಿಕೊಂಡವರು ಅವರ ಮೂವರು ಮಕ್ಕಳು. ಕಿರಣ, ಸುಪ್ರಿಯ, ಹರ್ಷವರ್ಧನ. ತಂದೆಯ ಚಿಂತನೆಗಳನ್ನು, ಸರಳ ಬದುಕನ್ನು ಅಳವಡಿಸಿಕೊಂಡವರು. ದಾಂಪತ್ಯಕ್ಕೆ 50 ತುಂಬಿದ ನೆನಪಿಗೆ ಸರಳವಾದ ಕಾರ್ಯಕ್ರಮ ಒಂದನ್ನು ತಂದೆ-ತಾಯಿಯ ಸಹಯೋಗದಲ್ಲಿ ಆಚರಿಸುವ ಉದ್ದೇಶ ಮಕ್ಕಳಲ್ಲಿ ಇತ್ತು. ಅದು ಸಾಧ್ಯವಾಗದೆ ಹೋದದ್ದು ಅತ್ಯಂತ ನೋವಿನ ಸಂಗತಿ.

ಪಾಲ್ತಾಡಿ ರಾಮಕೃಷ್ಣ ಆಚಾರ ಅವರಿಗೆ 60 ತುಂಬವ ಹೊತ್ತಿಗೆ ಸವಣೂರು ಸೀತಾರಾಮ ರೈಯವರ ಮುಂದಾಳತ್ವದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭವೊಂದು ಸವಣೂರಿನಲ್ಲಿ ವಿಜೃಂಭಣೆಯಿಂದ ನಡೆದಿತ್ತು. ಆ ಸಂದರ್ಭದಲ್ಲಿ ಅವರಿಗೆ ಅರ್ಪಿಸಿದ ಅವರ ಮನೆ ಹೆಸರನ್ನೇ ಇಟ್ಟುಕೊಂಡ ʼನೆಲೆ' ಎಂಬ ಅಭಿನಂದನಾ ಗ್ರಂಥದ ಸಂಪಾದಕತ್ವದ ಜವಾಬ್ದಾರಿ ನನಗೆ ಒದಗಿತ್ತು. ಅದೊಂದು ನನ್ನ ಬದುಕಿನ ಸಾರ್ಥಕ ಕ್ಷಣ. ಪ್ರೀತಿಯ ಗುರುಗಳಾದ ಪಾಲ್ತಾಡಿಯವರಿಗೆ ಸದ್ಗತಿ ಸಿಗಲಿ ಎಂದು ಆಶಿಸುವೆ.

ಪ್ರೊಫೆಸರ್ ನರೇಂದ್ರ ರೈ ದೇರ್ಲ























































































































































error: Content is protected !!
Scroll to Top