ಮುಂಬಯಿ: ವಾಂಖೇಡೆ ಸ್ಟೇಡಿಯಂನಲ್ಲಿ 2011ರಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಗ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಹೊಡೆದಿದ್ದ ಗೆಲುವಿನ ಸಿಕ್ಸರ್‌ನ ಚೆಂಡು ಕೊನೆಗೂ ಸಿಕ್ಕಿದೆ. ಶ್ರೀಲಂಕಾ ವಿರುದ್ಧ ನಡೆದಿದ್ದ ಈ ಫೈನಲ್ ಪಂದ್ಯದಲ್ಲಿ ಸಿಕ್ಸ್ ಬಾರಿಸುವ ಮೂಲಕ ಧೋನಿ ಭಾರತವನ್ನು ಎರಡನೇ ಸಲ ವಿಶ್ವ ಕ್ರಿಕೆಟ್ ಅಧಿಪತಿಯನ್ನಾಗಿ ಮಾಡಿದ್ದರು.ಧೋನಿ ಹೊಡೆದ ಸಿಕ್ಸ್‌ರ್‌ನ ಚೆಂಡು ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಬಿದ್ದಿತ್ತು. ಯಾರೋ ಒಬ್ಬ ಈ ಚೆಂಡನ್ನು ತೆಗೆದುಕೊಂಡು ಹೋಗಿದ್ದ. ಇಷ್ಟೆಲ್ಲ ವರ್ಷ ಹುಡುಕಿದರೂ ಭಾರತದ ಅಮೋಘ ಗೆಲುವನ್ನು ಸಾರಿದ ಈ ಚೆಂಡು ಸಿಕ್ಕಿರಲಿಲ್ಲ.
ಇದೀಗ ಈ ಚೆಂಡನ್ನು ಹುಡುಕಿ ಕೊಟ್ಟವರು ಬೇರೆ ಯಾರೂ ಅಲ್ಲ ಮಾಜಿ ಕ್ಯಾಪ್ಟನ್ ಸುನಿಲ್ ಗಾವಸ್ಕರ್. ಚೆಂಡನ್ನು ಗಾವಸ್ಕರ್‌ಗೆ ಪರಿಚ್ವಿರುವ ವ್ಯಕ್ತಿಯ ಗೆಳೆಯನೊಬ್ಬ ಹಿಡಿದಿದ್ದರಂತೆ. ಇತ್ತೀಚೆಗೆ ಗಾವಸ್ಕರ್‌ಗೆ ಈ ವಿಚಾರ ತಿಳಿದು ಬಂದಿದ್ದು, ಅವರು ಈ ಚೆಂಡನ್ನು ಮುಂಬಯಿ ಕ್ರಿಕೆಟ್ ಅಸೋಸಿಯೇಶನ್‌ಗೆ ಹಿಂದಿರುಗಿಸಲು ಮನವಿ ಮಾಡಿದ್ದಾರೆ.
ಎಂಸಿಎ 2011 ವಿಶ್ವಕಪ್ ಗೆಲುವನ್ನು ಒಂದು ಸ್ಮರಣೀಯ ಸಾಧನೆಯನ್ನಾಗಿ ಇತಿಹಾಸದ ಪುಟಗಳಿಗೆ ಸೇರಿಸಲು ಮುಂದಾಗಿದ್ದು, ಇದಕ್ಕಾಗಿ ಆ ಪಂದ್ಯಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಸಂಗ್ರಹಿಸುತ್ತಿದೆ. ಆದರೆ ಅಮೋಘ ಗೆಲುವನ್ನು ಸಾರಿದ ಚೆಂಡು ಸಿಗದೆ ಇದು ಪರಿಪೂರ್ಣವಾಗಿರಲಿಲ್ಲ.

ಧೋನಿ ಕಳೆದ ತಿಂಗಳು ಆಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಎಂಸಿಎ ಈ ಚೆಂಡಿಗಾಗಿ ತೀವ್ರ ಹುಡುಕಾಟ ನಡೆಸುತ್ತಿತ್ತು.
ಕುರ್ಚಿಗೂ ಇದೆ ವಿಶೇಷ ಮರ್ಯಾದೆ
ವಾಂಖೇಡೆ ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಚೆಂಡು ಹೋಗಿ ಬಿದ್ದ ಆ ಕುರ್ಚಿಗೂ ಸಿಗಲಿದೆ ವಿಶಿಷ್ಟ ಗೌರವ. ಈ ಕುರ್ಚಿಗೆ ಧೋನಿಯ ಹೆಸರಿಡಲಾಗುವುದು ಮಾತ್ರವಲ್ಲದೆ ಅದನ್ನು ವಿಶಿಷ್ಟವಾಗಿ ಅಲಂಕರಿಸಿ ಸಕಲ ವಿಐಪಿ ಮರ್ಯಾದೆಗಳನ್ನು ಕೊಡಲಾಗುವುದು.
ಆ ಕುರ್ಚಿಯನ್ನು ವಿಶೇಷವಾಗಿ ಅಲಂಕರಿಸಿಲಿದ್ದೇವೆ ಮತ್ತು ಅದರ ಐತಿಹಾಸಿಕ ಮಹತ್ವವನ್ನು ತಿಳಿಸುವ ಫಲಕವನ್ನು ಅಳವಡಿಸುತ್ತೇವೆ. ವಾಂಖೇಡೆಯಲ್ಲಿ ಈ ಕುರ್ಚಿಗೆ ತನ್ನದೇ ಆದ ಮಹತ್ವ ಸಿಗಲಿದೆ ಎಂದು ಎಂಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೆವಿಲಿಯನ್‌ನ 210ನೇ ನಂಬರ್ ಸೀಟಿನ ಮೇಲೆ ಹೋಗಿ ಬಿದ್ದಿತ್ತು ಧೋನಿ ಹೊಡೆದ ಸಿಕ್ಸರ್‌ನ ಚೆಂಡು. ಗಾವಸ್ಕರ್‌ಗೆ ಪರಿಚಿತರಾಗಿರುವ ವ್ಯಕ್ತಿಯೊಬ್ಬರ ಸ್ನೇಹಿತ ಅಂದು ಈ ಕುರ್ಚಿಯಲ್ಲಿ ಕುಳಿತಿದ್ದರು. ಚೆಂಡನ್ನು ಅವರೇ ಒಯ್ದಿದ್ದಾರೆ. ಈ ವಿಚಾರ ತಿಳಿದು ಬಂದ ಬಳಿಕ ಗಾವಸ್ಕರ್ ಎಂಸಿಎಗೆ ಈ ವಿಚಾರ ತಿಳಿಸಿದ್ದಾರೆ. ಆ ಗೆಳೆಯ ಚೆಂಡನ್ನು ಕೊಡಲೊಪ್ಪಿದ್ದಾರಂತೆ.
ಭಾರತದಲ್ಲಿ ಇದೇ ಮೊದಲು
ಒಂದು ಸೀಟಿಗೆ ಕ್ರಿಕೆಟಿಗನೊಬ್ಬನ ಹೆಸರಿಟ್ಟು ಗೌರವಿಸುತ್ತಿರುವುದು ಭಾರತದಲ್ಲಿ ಇದೇ ಮೊದಲು. ಆದರೆ ವಿದೇಶಗಳಲ್ಲಿ ಈ ಪರಿಕಲ್ಪನೆ ಹೊಸದಲ್ಲ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ 1993ರಲ್ಲಿ ನಡೆದ ಪ್ರಥಮ ದರ್ಜೆ ಪಂದ್ಯದಲ್ಲಿ ಸೈಮನ್ ಓ ಡೊನೆಲ್ ಹೊಡೆದ ಸಿಕ್ಸ್ 122 ಮೀಟರ್ ದೂರ ಹೋಗಿ ಬಿದ್ದಿತ್ತು. ಚೆಂಡು ಬಿದ್ದ ಸೀಟಿಗೆ ಹಳದಿ ಬಣ್ಣ ಬಳಿಯಲಾಗಿದೆ. 2018ರಲ್ಲಿ ಮೆಲ್ಬೋರ್ನ್ ನ ಎತಿಹಾಡ್ ಸ್ಟೇಡಿಯಂನಲ್ಲಿ ಬಿಗ್ ಬ್ಯಾಶ್ ಲೀಗ್ ಫ್ರಾಂಚೈಸಿ ತಂಡ ಮೆಲ್ಬೋರ್ನ್ ರೆನಿಗೇಡ್ ತನ್ನ ಮಾಜಿ ಆಟಗಾರ ಬ್ರಾಡ್ ಹಾಜ್ ಅವರು ಹೊಡೆದ ಸಿಕ್ಸ್ ಬಿದ್ದ ಜಾಗವನ್ನು ಕೆಂಪು ಬಣ್ಣ ಬಳಿದು ಗುರುತಿಸಿದೆ. ಇದು ಹಾಜ್ ಆಡಿದ ಕೊನೆಯ ಪಂದ್ಯವಾಗಿತ್ತು. ಹಾಜ್ ಸಿಡಿಸಿದ ಸಿಕ್ಸ್ 96 ಮೀಟರ್ ದೂರ ಹೋಗಿತ್ತು.
ನ್ಯೂಜಿಲ್ಯಾಂಡ್‌ನ ಆಕ್ಲಂಡ್‌ನಲ್ಲಿ ಗ್ರಾಂಟ್ ಎಲಿಯಟ್ ಹೊಡೆದ ಸಿಕ್ಸರ್ ಚೆಂಡು ಬಿದ್ದ ಜಾಗದಲ್ಲಿ ಒಂದು ಫಲಕವನ್ನು ಅಳವಡಿಸಲಾಗಿದೆ. ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ಕಾಣಿಸಿಕೊಳ್ಳಲು ಈ ಸಿಕ್ಸ್ ಕಾರಣವಾಗಿತ್ತು. 2011ಲ್ಲಿ ವಾಂಖೇಡೆ ಸ್ಟೇಡಿಯಂನಲ್ಲಿ ನುವಾನ್ ಕುಲಶೇಖರ ಎಸೆದ ಚೆಂಡನ್ನು ಸಿಕ್ಸ್ ಎತ್ತುವ ಮೂಲಕ ಭಾರತದ ಕ್ರಿಕೆಟ್ ಅಭಿಮಾನಿಗಳು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ವಿಶ್ವಕಪ್ ಅನ್ನು ಧೋನಿ ತಂದುಕೊಟ್ಟಿದ್ದರು.
ಉಮೇಶ್ ಕೋಟ್ಯಾನ್







































