ಬೋನಿ ಕಪೂರ್- ಮೋನಾ ಕಪೂರ್ ದಂಪತಿಯ ಪುತ್ರ ಅರ್ಜುನ್ ಕಪೂರ್ ತಾನು ಕೋವಿಡ್ 19 ಪಾಸಿಟಿವ್ ಎಂದು ಘೋಷಿಸಿದ ಬೆನ್ನಲ್ಲೇ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ತಾನೂ ಕೂಡ ಪಾಸಿಟಿವ್ ಎಂದು ಘೋಷಿಸಿಕೊಂಡಿರುವುದು ಕೆಲವರಿಗೆ ಆಶ್ಚರ್ಯ ಉಂಟು ಮಾಡಿದರೆ ಕತೆ ಗೊತ್ತಿದ್ದವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಸಲ್ಮಾನ್ ಖಾನ್ನ ಸಹೋದರ ಅರ್ಬಾಝ್ ಖಾನ್ ಗೆ 1998 ರಿಂದ 2017 ರವರೆಗೆ ಪತ್ನಿಯಾಗಿದ್ದುಕೊಂಡು 18 ರ ಹರೆಯದ ಮಗನ ತಾಯಿಯಾಗಿರುವ (ಈಗ ಆಕೆಗೆ 47 ವರ್ಷ) ಮಲೈಕಾ ಅರೋರಾ ಪತಿಗೆ ವಿಚ್ಛೇದನ ನೀಡಿದ ಸಂದರ್ಭದಲ್ಲಿ ಅರ್ಜುನ್ ಕಪೂರ್ ಜತೆ ಸಲುಗೆಯ ಗೆಳೆತನ ಹೊಂದಿದ್ದಾಳೆ ಎಂದು ಬಾಲಿವುಡ್ ಪಡಸಾಲೆಯಲ್ಲೆ ಗುಸುಗುಸು ಸುದ್ದಿ ಹರಡಿದ್ದಾಗ ಯಾರೊಬ್ಬರೂ ನಂಬಲಿಲ್ಲ. ಡೈವೊರ್ಸ್ ಗೆ ಈ ಪ್ರೇಮ ಪ್ರಕರಣವೇ ಕಾರಣ ಎಂಬುದು ಬಳಿಕ ಮೆಲ್ಲಮೆಲ್ಲನೆ ಅರ್ಥವಾಗತೊಡಗಿತು.ಆದರೆ ಈವರೆಗೂ ಅವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಈ ಪ್ರೇಮ ಸಂಬಂಧ ಮಾತ್ರ ನಿಜ ಎಂಬುದು ಹೆಚ್ಚಿನವರಿಗೆ ಗೊತ್ತಾಗಿ ಹೋಗಿತ್ತು.ಈಗ ಕೊರೊನಾ ಇದನ್ನು ಮತ್ತೆ ಸಾಬೀತು ಪಡಿಸಿತು.ಇದೇನು ಹೊಸ ಸಂಗತಿಯಲ್ಲ, ಬಾಲಿವುಡ್ ಮಂದಿಗೆ ಅಲ್ಲಿನ ಎಲ್ಲ ಪ್ರೇಮವೂ ಕುರುಡೇ ಆಗಿದೆ ಎಂಬುದಕ್ಕೆ ಹಲವು ಸ್ಯಾಂಪಲ್‌ಗಳು ಸಿಗುತ್ತವೆ.
ಬಾಲಿವುಡ್ ನಲ್ಲಿ ಒಂದು ನೆಲೆ ಕಾಣಬೇಕಾದರೆ ಅಥವಾ ನಿರ್ಮಾಪಕ, ನಿರ್ದೇಶಕರ ಗಮನ ಸೆಳೆಯಬೇಕಾದರೆ ಪ್ರಣಯ ಪ್ರಸಂಗದ ಗಾಳಿಸುದ್ದಿ ಹರಡಿರಬೇಕು. ಅದಕ್ಕಾಗಿಯೇ ನಟ ನಟಿಯರು ಪ್ರೇಮ ಬಲೆ ಸೃಷ್ಟಿಸಿ ಅದರಲ್ಲಿ ಬೀಳುತ್ತಿರುವುದು ಈಗೀಗ ಸಾಮಾನ್ಯವಾಗಿ ಬಿಟ್ಟಿದೆ.ಇದಕ್ಕೆ ತಾಜಾ ಉದಾಹರಣೆ ರಿಯಾ ಚಕ್ರವರ್ತಿ.

ಜಾನ್ ಅಬ್ರಹಾಂ- ಬಿಪಾಶಾ ಬಸು,ರಣಬೀರ್ ಕಪೂರ್- ದೀಪಿಕಾ ಪಡುಕೋಣೆ, ರಣವೀರ್ ಸಿಂಗ್- ಅನುಷ್ಕಾ ಶರ್ಮಾ,ದೀಪಿಕಾ ಪಡುಕೋಣೆ – ರಣವೀರ್ ಸಿಂಗ್,ಅನುಷ್ಕಾ- ವಿರಾಟ್ ಕೊಹ್ಲಿ(ಕ್ರಿಕೆಟಿಗ), ಕರೀನಾ ಕಪೂರ್ – ಶಾಹಿದ್ ಕಪೂರ್, ಸೈಫ್ ಅಲಿ ಖಾನ್ – ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ- ಶಾಹಿದ್ ಕಪೂರ್ ಮತ್ತಿತರರ ಪ್ರೇಮ ಪ್ರಸಂಗಗಳನ್ನು ಗಮನಿಸಬಹುದು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಈ ಪ್ರಣಯ ಜೋಡಿಗಳನ್ನು ಹಾಕಿಕೊಂಡು ಚಿತ್ರ ತಯಾರಿಸಲು ನಿರ್ದೇಶಕ, ನಿರ್ಮಾಪಕರು ಮುಗಿ ಬೀಳುತ್ತಿರುವುದು. ಈ ಮೂಲಕ ಆ ಜೋಡಿಗೂ ಒಂದಷ್ಟು ಕೆಲಸ ಸಿಗುವುದು. ಹೆಚ್ಚಿನವರು ಈ ರೀತಿ ಕೆಲಸ ಪಡೆದು ಬಳಿಕ ಅವಕಾಶ ಕಡಿಮೆ ಆಗುತ್ತಿರುವುದು ಗೋಚರವಾಗುತ್ತಲೇ ತಮ್ಮ ಜೊತೆಗಾರಿಕೆಯನ್ನು ತುಂಡರಿಸಿ ಬಿಡುವುದನ್ನು ನಾವು ಕಾಣುತ್ತಿದ್ದೇವೆ.
ಏಳಿಂಜೆ ನಾಗೇಶ್,ಮುಂಬಯಿ-98929 80750








































