ಕಾರ್ಕಳ : ನಿಟ್ಟೆ ಎನ್.ಎಂ.ಎ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮವಾಗಿ ಆರಂಭವಾದ ಎಐಸಿ ನಿಟ್ಟೆ ಇನ್‌ಕ್ಯುಬೇಷನ್ ಸೆಂಟರ್ ಅನ್ನು ಕೇಂದ್ರ ಸರಕಾರದ ನೀತಿ ಆಯೋಗದ ಅಟಲ್ ಇನೊವೇಷನ್ ಸೆಂಟರ್ ನಿರ್ದೇಶಕ ರಮಣ ರಾಮನಾಥನ್ ವರ್ಚುವಲ್ ಆಗಿ ಆ. 10ರಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆತ್ಮನಿರ್ಭರ ಭಾರತದ ಪ್ರಧಾನ ಸ್ತಂಭವಾಗಲಿದೆ. ನಮ್ಮ ದೇಶದ ಯುವ ಜನತೆ ಸೃಜನಶೀಲತೆ, ಆವಿಷ್ಕಾರ, ಉತ್ಸಾಹಗಳನ್ನು ಹೊಂದಿ ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ಸಲ್ಲಿಸಬೇಕೆಂದರು.
ನಿಟ್ಟೆ ಡೀಮ್ಡ್ ಯುನಿವರ್ಸಿಟಿ ಕುಲಪತಿ ಡಾ. ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್ ಸೆಂಟರ್ ಚಾರಿತ್ರಿಕ ಸಂಗತಿಯಾಗಿದ್ದು, ಇದರಿಂದಾಗಿ ಯುವ ಜನತೆ ಉದ್ಯಮಶೀಲತೆಯತ್ತ ಆಕರ್ಷಿತರಾಗಲಿದ್ದಾರೆ ಎಂದರು.
ಸಹಕುಲಪತಿ ವಿಶಾಲ್ ಹೆಗ್ಡೆ, ಉಪಕುಲಪತಿ ಡಾ. ಸತೀಶ್ ಕುಮಾರ್, ಸಹ ಉಪಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲೂಣ್ಕರ್, ರೆಜಿಸ್ಟ್ರಾರ್ ಯೋಗೀಶ್ ಹೆಗ್ಡೆ, ನಿಟ್ಟೆ ವಿವಿ ರಿಜಿಸ್ಟ್ರಾರ್ ಡಾ. ಅಲ್ಕ್ ಕುಲಕರ್ಣಿ ಉಪಸ್ಥಿತರಿದ್ದರು. ನಿಟ್ಟೆ ಇನ್ ಕ್ಯುಬೇಷನ್ ಸೆಂಟರ್‌ನ ಮುಖ್ಯಸ್ಥ ಡಾ. ಎ.ಪಿ. ಆಚಾರ್ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಡಾ. ಸುಧೀರ್ ರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.