
ಮಂಗಳೂರು, ಆ. 10:ಎರಡೂ ಕೈ ಇಲ್ಲದ ಕಾರಣ ಕಾಲಿನಿಂದಲೇ ಪರೀಕ್ಷೆ ಬರೆದು ಶಿಕ್ಷಣ ಸಚಿವರ ಗಮನವನ್ನು ಸೆಳೆದಿದ್ದ ಬಂಟ್ವಾಳದ ಕಂಚಿಕಾರ ಪೇಟೆಯ ಕೌಶಿಕ್ 424 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಬಂಟ್ವಾಳದ ಎಸ್. ವಿ. ಎಸ್.ಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಕೌಶಿಕ್ ನ ಸಾಧನೆ ಬಗ್ಗೆ ತಿಳಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಂಡಳೂರಿಗೆ ಬಂದ ಸಂದರ್ಭದಲ್ಲಿ ಕೌಶಿಕ್ ನನ್ನು ಕರೆಸಿ ಅಭಿನಂದಿಸಿದ್ದರು.
ಇಂದು ಫಲಿತಾಂಶ ಬಂದಾಗ ಸಚಿವರು ಟ್ವೀಟ್ ಮಾಡಿ ಕೌಶಿಕ್ ನನ್ನು ಅಭಿನಂದಿಸಿ ಇಂಥ ವ್ಯಕ್ತಿಗಳು ಬದುಕಿನ ಸಾರ್ಥಕತೆಗೆ ಅರ್ಥ ಕೊಡುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ ಎಂದಿದ್ದಾರೆ.
ಹುಟ್ಟುವಾಗಲೇ ವೈಕಲ್ಯವಿದ್ದರೂ ಕೌಶಿಕ್ ಕಾಲಿನ ಮೂಲಕವೇ ತನ್ನ ಹೆಚ್ಚಿನೆಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಾನೆ. ಕಲಿಯುವುದರಲ್ಲಿ ಮಾತ್ರವಲ್ಲದೆ ನೃತ್ಯ, ಮಣ್ಣಿನಲ್ಲಿ ಕಲಾಕೃತಿ ರಚಿಸುವುದು ಇತ್ಯಾದಿ ಕಲೆಯಲ್ಲೂ ಆಸಕ್ತಿ ಹೊಂದಿದ್ದಾನೆ.