ಇಡುಕ್ಕಿ, ಆ. 7: ಕೇರಳದಲ್ಲಿ ಕಳೆ ಮೂರು ದಿನಗಳಿಂದೀಚೆಗೆ ಭಾರಿ ಮಳೆ ಸುರಿಯುತ್ತಿದ್ದು, ಇಡುಕ್ಕಿ ಜಿಲ್ಲೆಯ ಮನ್ನಾರ್ ನಲ್ಲಿ ಬೆಟ್ಟ ಕುಸಿದು ಐದು ಮ<ದಿ ಸಾವನ್ನಪ್ಪಿದ್ದಾರೆ. ಮಣ್ಣಿನಡಿಯಲ್ಲಿ ಇನ್ನೂ ಹಲವು ಮಂದಿ ಸಿಕ್ಕಿಬಿದ್ದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಶ್ಚಿಮಘಟ್ಟ ಶ್ರೇಣಿಯ ಪೆಟ್ಟಿಮುಡಿ ಬೆಟ್ಟ ಇಂದು ನಸುಕಿನ ಹೊತ್ತು ಕುಸಿದು ಬಿದ್ದಿದೆ. ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲುಕಿದ್ದಾರೆ ಎಂದು ಇಲ್ಲಿಂದ ಬಂದಿರುವ ಪ್ರಾಥಮಿಕ ವರದಿಗಳು ತಿಳಿಸಿವೆ.
ಭೂಕುಸಿತಕ್ಕೆ ಒಂದು ಕ್ವಾರ್ಟರ್ಸ್ ಕಟ್ಟಡ ಮತ್ತು ಚರ್ಚ್ ಕಟ್ಟಡ ಧರೆಗುರುಳಿ ಸುಮಾರು 80 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದುವರೆಗೆ ಐವರ ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಬೇಗನೆ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ.
ಇದುವರೆಗೆ ಏಳು ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.