ಬೆಂಗಳೂರು : ಕರ್ನಾಟಕದ ಡಿಜಿಪಿ ಕೆ. ರಾಮಚಂದ್ರರಾವ್ ಕಚೇರಿಯಲ್ಲಿ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನಿನ್ನೆ ಮಧ್ಯಾಹ್ನದ ಹೊತ್ತಿಗೆ 10 ದಿನಗಳ ಕಡ್ಡಾಯ ರಜೆ ಮೇಲೆ ತೆರಳಿದ್ದ ರಾಜಚಂದ್ರ ರಾವ್ ಅವರನ್ನ ರಾತ್ರಿ ಹೊತ್ತಿಗೆ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವಿಚಾರಣೆ ಇನ್ನೂ ಬಾಕಿಯಿರುವ ಕಾರಣ ಅಮಾನತುಗೊಳಿಸುರುವುದಾಗಿ ಆದೇಶದಲ್ಲಿ ತಿಳಿಸಿದೆ.
ರಾಮಚಂದ್ರರಾವ್ ತನ್ನ ಕಚೇರಿಯ ಒಳಗಡೆ ಸಮವಸ್ತ್ರದಲ್ಲಿರುವಾಗ ನಡೆದಿರುವ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ವಿಡಿಯೊ ಬಗ್ಗೆ ಸ್ಪಷ್ಟನೆ ನೀಡಲು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸಕ್ಕೆ ರಾಮಚಂದ್ರ ರಾವ್ ತೆರಳಿದಾಗ ಅವರನ್ನು ಭೇಟಿಯಾಗಲು ಸಚಿವರು ನಿರಾಕರಿಸಿದ್ದರು.

ರಾಸಲೀಲೆ ಪ್ರಕರಣದ ಆರೋಪವನ್ನು ಡಿಜಿಪಿ ರಾಮಚಂದ್ರರಾವ್ ಅಲ್ಲಗಳೆದಿದ್ದು, ಈ ವಿಡಿಯೋ ನೋಡಿ ನನಗೆ ಶಾಕ್ ಆಗಿದೆ. ಇದರಲ್ಲಿರುವ ಮಹಿಳೆ ಯಾರೆಂಬುದು ನನಗೆ ಗೊತ್ತಿಲ್ಲ. ಇದು ತಿರುಚಿದ ಎಐ ವಿಡಿಯೋ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.








