ಒಂದು ಅಡಕೆ ಮರಕ್ಕೆ ಕೇವಲ 16 ರೂ. ಸರಕಾರದ ಪರಿಹಾರ

ಅಡಕೆ ಬೆಳೆಗಾರರಿಗೆ ಕೊಳೆರೋಗ ಬಾಧೆಯೊಂದಿಗೆ ಬಿರುಗಾಳಿ ಹೊಡೆತ

ಕಾರ್ಕಳ : ಈ ವರ್ಷ ವಿಪರೀತ ಮಳೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಅಡಕೆ ಕೃಷಿಕರು ಕೊಳೆರೋಗ ಬಾಧೆಯೊಂದಿಗೆ ಇದೀಗ ಬಿರುಗಾಳಿಯ ಹೊಡೆತಕ್ಕೂ ಸಿಲುಕಿ ತತ್ತರಿಸಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಡಕೆ ತೋಟಗಳಲ್ಲಿ ಕೊಳೆರೋಗ ಆವರಿಸಿ ಶೇ. 50ರಿಂದ 85ರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ನಿರಂತರ ಮಳೆಯಿಂದಾಗಿ ಕೃಷಿಕರಿಗೆ ಬೋರ್ಡೋ ದ್ರಾವಣ ಸಿಂಪಡಿಸಲು ಸಾಧ್ಯವಾಗಿಲ್ಲ. ಹವಾಮಾನ ವೈಪರೀತ್ಯ, ಕೊಳೆರೋಗ, ಹಳದಿ ಹಾಗೂ ಎಲೆಚುಕ್ಕಿ ರೋಗ, ಬಿರುಗಾಳಿಯಿಂದ ಅಡಕೆ ಕೃಷಿಕರು ಅಕ್ಷರಶಃ ಕಂಗಾಲಾಗಿದ್ದಾರೆ.

ಈ ವರ್ಷ ಬೀಸಿದ ಗಾಳಿಗೆ ಸಾವಿರಾರು ಅಡಕೆ ಮರಗಳು ಧರಾಶಾಯಿಯಾಗಿದೆ. ಕೃಷಿ ಹಾನಿ ಪರಿಹಾರಕ್ಕಾಗಿ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಸರಕಾರದಿಂದ ದೊರೆಯುವ ಪರಿಹಾರ ಒಂದು ಮರಕ್ಕೆ ಕೇವಲ 16 ರೂಪಾಯಿ. ಆಶ್ಚರ್ಯವೆನಿಸಿದರೂ ಇದು ಸತ್ಯ. ಪರಿಹಾರಕ್ಕಾಗಿ ಸಾಕಷ್ಟು ಶ್ರಮಪಟ್ಟು ಇದ್ದ ದಾಖಲೆಗಳನ್ನೆಲ್ಲ ಕಂದಾಯ ಇಲಾಖೆಗೆ ಸಲ್ಲಿಸಿ, ಹಲವು ತಿಂಗಳು ಕಾದ ಬಳಿಕ ಪರಿಹಾರ ಪಡೆಯುವಲ್ಲಿ ಕೃಷಿಕ ಯಶಸ್ವಿಯಾದರೂ ಸಿಗುವುದು ಮಾತ್ರ ಜುಜುಬಿ ಮೊತ್ತ. ಅಷ್ಟು ದಿನದ ಹೋರಾಟ, ಅಲೆದಾಟದ ಅನಂತರ ಕೃಷಿಕರಿಗೆ ದೊರೆಯುವುದು ಜೆರಾಕ್ಸ್‌ ಚಾರ್ಜ್‌ ಮಾತ್ರ.

ಸರಾಸರಿ 2 ಸಾವಿರ ಮೌಲ್ಯ
ಅಡಕೆ ಮರ ಫಸಲು ಬರಲು ಕನಿಷ್ಠ 6 ವರ್ಷಗಳು ಬೇಕು. ಆಮೇಲೆ ಇಳುವರಿ ದೊರೆಯುವುದು. ಅಲ್ಲಿ ತನಕ ಕೃಷಿಕ ಸಾಕಷ್ಟು ಶ್ರಮ, ಸಮಯ, ಖರ್ಚು ಭರಿಸಬೇಕಾಗುವುದು. ಗಾಳಿಗೆ ಒಂದು ಮರ ಕಳೆದುಕೊಂಡರೆ ಅಡಕೆ ಕೃಷಿಕನಿಗೆ ಸಾವಿರಾರು ರೂ. ನಷ್ಟವುಂಟಾಗುತ್ತದೆ. ಸಾಮಾನ್ಯವಾಗಿ ಒಂದು ಮರದಿಂದ ಸರಾಸರಿ 2 ಸಾವಿರ ರೂ. ಮೌಲ್ಯದ ಇಳುವರಿ ಲಭ್ಯವಾಗುವುದು. ಒಂದು ವರ್ಷದ ಇಳುವರಿ ಮೊತ್ತವನ್ನೂ ಸರಕಾರ ಪಾವತಿಸುವುದಿಲ್ಲ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಅಂದರೆ 130 ರೂಪಾಯಿ ಅಡಿಕೆ ಗುಂಡಿ ತೆಗೆಯಲು ಎನ್‌ಆರ್‌ಇಜಿ ಯೋಜನೆಯಡಿ ಪಾವತಿಸಲಾಗುತ್ತಿದೆ.

ನಿಯಮದ ತೊಡಕು
ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ನಿಯಮದನ್ವಯ ಶೇ. 33ರಷ್ಟು ಬೆಳೆ ನಷ್ಟ ಸಂಭವಿಸಿದ್ದಲ್ಲಿ ಮಾತ್ರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಅದಕ್ಕಿಂತ ಕಡಿಮೆ ನಷ್ಟ ಸಂಭವಿಸಿದ್ದಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತಿಲ್ಲ. ಇಂತಹ ನಿಯಮದಿಂದಾಗಿ ಅರ್ಜಿ ಸಲ್ಲಿಸದಂತಹ ಪರಿಸ್ಥಿತಿ ಕೃಷಿಕರದ್ದು.

ವರದಿ : ರಾಮಚಂದ್ರ ಬರೆಪ್ಪಾಡಿ









































error: Content is protected !!
Scroll to Top