ಬೆಂಗಳೂರು : ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಯಲ್ಲಿ ನಡೆದಿದೆ. ನೇಪಾಳ ಮೂಲದ ಕಾಲೆ ಸರೆರಾ(60), ಲಕ್ಷ್ಮೀ ಸರೇರಾ(50), ಉಷಾ ಸರೇರಾ(40), ಪೊಲ್ ಸರೇರಾ(16) ಎನ್ನುವ ಒಂದೇ ಕುಟುಂಬದ ನಾಲ್ವರು ರಾತ್ರಿ ಕೋಳಿ ಫಾರಂನಲ್ಲಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ನೇಪಾಳಿ ಕುಟುಂಬ 8 ದಿನಗಳ ಹಿಂದೆಯಷ್ಟೇ ಕೆಲಸ ಅರಸಿ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಗೆ ಬಂದಿತ್ತು. ಶನಿವಾರ ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದವರು ಇಂದು ಬೆಳಗ್ಗೆ ಸ್ಥಳೀಯರು ಹೋಗಿ ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ.
ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.
ಕೋಳಿ ಪಾರಂನಲ್ಲಿ ಸೊಳ್ಳೆಕಾಟ ಹೆಚ್ಚಾಗಿದ್ದರಿಂದ ರಾತ್ರಿ ನಿದ್ದೆ ಬರಲ್ಲ ಅಂತ ಹೊಗೆ ಹಾಕಿದ್ದು, ಇದ್ದಿಲಿನಿಂದ ಹೊಗೆ ಹಾಕಿಕೊಂಡು ಮಲಗಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಕೊಠಡಿಯಲ್ಲಿ ಕಿಟಕಿ ಬಾಗಿಲು ಬಂದ್ ಆಗಿದ್ದ ಕಾರಣ ಹೊಗೆ ದಟ್ಟವಾಗಿ ಆವರಿಸಿದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ.
ಒಂದೇ ಕುಟುಂಬದ ನಾಲ್ವರು ಅಸಹಜ ಸಾವು
