Thursday, December 1, 2022
spot_img
Homeಸುದ್ದಿಎಲ್ಲ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ

ಎಲ್ಲ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ

ʼಒಂದು ರಾಷ್ಟ್ರ, ಒಂದು ಸಮವಸ್ತ್ರʼ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ ಮೋದಿ

ಸೂರಜ್‌ಕುಂಡ್ : ಪೊಲೀಸರಿಗೆ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ ಕಲ್ಪನೆಯನ್ನು ಪ್ರಧಾನಿ ನರೆಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ಆದರೆ ಇದು ಕೇವಲ ತಮ್ಮ ಸಲಹೆಯಾಗಿದ್ದು, ಅದನ್ನು ರಾಜ್ಯಗಳ ಮೇಲೆ ಹೇರಲು ಬಯಸುವುದಿಲ್ಲ ಎಂದಿದ್ದಾರೆ.
ಹ್ರಯಾಣದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ರಾಜ್ಯಗಳ ಗೃಹ ಮಂತ್ರಿಗಳ “ಚಿಂತನ್ ಶಿಬಿರ” ವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಅಪರಾಧಗಳು ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಹೇಳಿದರು. ಸಹಕಾರಿ ಒಕ್ಕೂಟವು ಸಂವಿಧಾನದ ಭಾವನೆ ಮಾತ್ರವಲ್ಲದೆ ರಾಜ್ಯಗಳು ಮತ್ತು ಕೇಂದ್ರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪೊಲೀಸರಿಗೆ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ವು ಕೇವಲ ಆಲೋಚನೆಯಾಗಿದೆ. ಅದನ್ನು ನಾನು ರಾಜ್ಯಗಳ ಮೇಲೆ ಹೇರುವುದಿಲ್ಲ, ಆಲೋಚನೆ ಮಾಡಿ ಮನಸ್ಸು ಮಾಡಿದರೆ ಜಾರಿಗೆ ತರಬಹುದು. ಇದು 5, 50, ಅಥವಾ 100 ವರ್ಷಗಳಲ್ಲಿ ಆಗಬಹುದು. ಸ್ವಲ್ಪ ಯೋಚಿಸಿ ಎಂದಷ್ಟೇ ಹೇಳಿದರು.
ದೇಶದಾದ್ಯಂತ ಪೊಲೀಸರ ಗುರುತು ಒಂದೇ ಆಗಿದ್ದರೆ ಚೆನ್ನಾಗಿರುತ್ತದೆ ಎಂದು ನಾನು ಆಶಿಸುತ್ತೇನೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭದ್ರತೆಯ ಹಲವು ಸವಾಲುಗಳನ್ನು ಎದುರಿಸಲು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಸಂಘಟಿತ ಕ್ರಮ ಕೈಗೊಳ್ಳಬೇಕು. ಹಳೆಯ ಕಾನೂನುಗಳನ್ನು ಪರಿಶೀಲಿಸಬೇಕು ಮತ್ತು ಪ್ರಸ್ತುತ ಸಂದರ್ಭಕ್ಕೆ ತಿದ್ದುಪಡಿ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ಪೊಲೀಸರ ಬಗ್ಗೆ ಉತ್ತಮ ಗ್ರಹಿಕೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ ಇಲ್ಲಿನ ತಪ್ಪು, ಲೋಪದೋಷಗಳನ್ನು ಗಮನಿಸಿ ಪರಿಹರಿಸಬೇಕು. ದಕ್ಷತೆ, ಉತ್ತಮ ಫಲಿತಾಂಶ ಮತ್ತು ಸಾಮಾನ್ಯ ಜನರಿಗೆ ರಕ್ಷಣೆಯನ್ನು ನೀಡಲು ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಪರಸ್ಪರ ಸಹಕರಿಸಬೇಕು ಎಂದು ಸಹ ಪ್ರತಿಪಾದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!