ಕಾರ್ಕಳ: ಬೇಕರಿ ಕರಾರಿನ ಬಾಕಿಯಿರುವ ಹಣ ಕೇಳಲು ಹೋದ ಅನಂತಶಯನ ವೃತ್ತದ ಬಳಿಯಿರುವ ಶ್ರೇಷ್ಠಾ ಅಪಾರ್ಟ್‌ಮೆಂಟ್ ನಿವಾಸಿ ಶಾಂತಲಾ (47) ಎಂಬವರಿಗೆ ಬೇಕರಿ ನಡೆಸುತ್ತಿರುವ ದರ್ಶನ್ ಎಂಬಾತ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನಂತಶಯನ ಬಳಿಯಿರುವ ಕಾಮತ್ ಅಯ್ಯಂಗಾರ್ ಬೇಕರಿಯನ್ನು ವಿನಯ ಎಂಬವರಿಗೆ ನಡೆಸಿಕೊಂಡು ಹೋಗಲು ಶಾಂತಲಾ ಅವರು ಕರಾರು ಮಾಡಿಕೊಟ್ಟಿದ್ದರು. ಬೇಕರಿಗೆ ಶಾಂತಲಾ 8 ಲ.ರೂ. ಹೂಡಿಕೆ ಮಾಡಿದ್ದರು. ಒಂದು ವರ್ಷದ ಹಿಂದೆ ಬೇಕರಿ ವ್ಯವಹಾರದಲ್ಲಿ ನಷ್ಟವಾದ ಪರಿಣಾಮ ವಿನಯ ಈ ಬೇಕರಿಯನ್ನು ದರ್ಶನ್‌ಗೆ ನೀಡಿ ಶಾಂತಲಾ ಅವರಿಗೆ ಬಾಕಿಯಿರುವ 7 ಲ.ರೂ.ಯನ್ನು ದರ್ಶನ್ ಪಾವತಿಸಬೇಕೆಂದು ಕರಾರು ಮಾಡಿಕೊಂಡಿದ್ದರು. ಈ ಕರಾರಿನ ಪ್ರಕಾರ ಗುರುವಾರ ಶಾಂತಲಾ ಹಣ ಕೇಳಲು ಹೋದಾಗ ದರ್ಶನ್ ಹಣ ಕೊಡಲು ಒಪ್ಪದೆ ಅವಾಚ್ಯವಾಗಿ ನಿಂದಿಸ ಹಲ್ಲೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.
ಬೈಕಿಗೆ ಕಾರು ಡಿಕ್ಕಿ: ಸವಾರರಿಗೆ ಗಾಯ
ಹೆಬ್ರಿ : ಆಗುಂಬೆ-ಹೆಬ್ರಿ ರಸ್ತೆಯಲ್ಲಿ ಗೋಳಿಯಂಗಡಿ ಸಮೀಪ ಬೈಕಿಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಹಿಂಬದಿ ಸವಾರ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಕುಂದಾಪುರ ತಾಲೂಕಿನ ಸಿದ್ದಾಪುರದ ಗಡಿಬಚ್ಚಲು ನಿವಾಸಿಗಳಾದ ಚಂದ್ರ ಕುಲಾಲ್ (32) ಮತ್ತು ಅರುಣ್ ಕುಲಾಲ್ ಎಂಬವರು ಬೈಕಿನಲ್ಲಿ ಹಾಲಾಡಿ ಕಡೆ ಹೋಗುತ್ತಿರುವಾಗ ಗೋಳಿಯಂಗಡಿ ಪೇಟೆಯಿಂದ ತುಸು ಮುಂದೆ ಕಾರು ಹಠಾತ್ ಬಲಬದಿಗೆ ಬಂದ ಪರಿಣಾಮ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರರಿಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕನ ಅತಿ ವೇಗದ ಮತ್ತು ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.








































