ಕಾರ್ಕಳ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆಗೆ ಒಂದು ಗುಂಪಿನ ಒತ್ತಾಯ

0

ಕಾರ್ಕಳ : ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಅಧಿಕಾರ ವಹಿಸಿ ತಿಂಗಳಾಗುವ ಮೊದಲೇ ಕಾಂಗ್ರೆಸ್‌ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದಿದೆ. ಅ. 8ರಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸದಾಶಿವ ದೇವಾಡಿಗ ಇದೀಗ ಸ್ವಪಕ್ಷೀಯರಿಂದಲೇ ಭಾರಿ ವಿರೋಧ ಎದುರಿಸುತ್ತಿದ್ದಾರೆ.

ಕಾರ್ಯಕರ್ತರಲ್ಲಿ ಅಸಮಾಧಾನ

ಸದಾಶಿವ ದೇವಾಡಿಗ ಅವರು ಕಾಂಗ್ರೆಸ್‌ ಪಕ್ಷದ ಸಕ್ರೀಯ ಕಾರ್ಯಕರ್ತನಲ್ಲ. ವೀರಪ್ಪ ಮೊಯಿಲಿ ಅವರ ಶಿಫಾರಸ್ಸು ಮತ್ತು ಮುತುವರ್ಜಿಯಿಂದಾಗಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸದೇ ಸದಾಶಿವ ಅವರನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಮುನ್ನಡೆಸುವ ಸಾಮರ್ಥ್ಯ ಮತ್ತು ರಾಜಕೀಯ ಅನುಭವ, ಪಕ್ಷ ಸಂಘಟನೆಗೆ ಒತ್ತು ನೀಡುವಂತಹ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿತ್ತು ಎನ್ನುವುದು ಕಾಂಗ್ರೆಸ್‌ ಕಾರ್ಯಕರ್ತರ ಒಂದು ವರ್ಗದ ಅಭಿಪ್ರಾಯವಾಗಿದೆ. ಅಲ್ಲದೇ ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಮಾಜಿ ಸಿ.ಎಂ. ವೀರಪ್ಪ ಮೊಯ್ಲಿಯೇ ಕಾರಣವೆಂದು ಕೆಲ ಕಾರ್ಯಕರ್ತರು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಹೊಟೇಲ್‌ನಲ್ಲಿ ಮೀಟಿಂಗ್‌

ವಾರದ ಹಿಂದೆ ಕಾರ್ಕಳ ಪೇಟೆಯಲ್ಲಿನ ಹೊಟೇಲ್‌ ಒಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಭೆ ಸೇರಿದ್ದರು. ಈ ವೇಳೆ ಕಾರ್ಕಳ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಒತ್ತಾಯ ಕೇಳಿಬಂದಿದೆ ಎನ್ನಲಾಗುತ್ತಿದೆ. ಸುಮಾರು 200ಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಮುಂಬರುವ ಪಂಚಾಯತ್‌ ಚುನಾವಣೆ, ನಾಯಕತ್ವ, ವಿಧಾನ ಸಭಾ ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷದ ಮುಖಂಡರು ಒಂದು ತೀರ್ಮಾನಕ್ಕೆ ಬರುವಂತೆಯೂ ಸಭೆಯಲ್ಲಿ ಒತ್ತಾಯ ಕೇಳಿಬಂದಿದೆ.

ಸಹಿ ಸಂಗ್ರಹ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಿಗೆ ಪತ್ರ ಕಳುಹಿಸಿಕೊಡುವ ನಿಟ್ಟನಲ್ಲಿ ಸಹಿ ಸಂಗ್ರಹಿಸಲಾಗಿದೆ. ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲಾವರು ವಿಚಾರ ಪತ್ರದಲ್ಲಿ ಪ್ರಸ್ತಾವಿಸಲಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

Previous articleಮರ್ಡರ್‌ಗೆ 55 ಸಾವಿರ, ಕೈಕಾಲು ಮುರಿದರೆ 5 ಸಾವಿರ – ಬೆಚ್ಚಿಬೀಳಿಸಿದ “ಗೂಂಡಾ ಸೇವೆ”ಯ ಜಾಹೀರಾತು
Next articleಉಡುಪಿಯಲ್ಲಿ ಸಜ್ಜಾಗಿದೆ ಕೊರೊನಾ ಲಸಿಕೆ ಸಂಗ್ರಹ ಕೇಂದ್ರ

LEAVE A REPLY

Please enter your comment!
Please enter your name here