ಕಾರ್ಕಳ :ಆ.21: ಕೊರೊನಾ ವೈರಸ್‍ನಿಂದಾಗಿ ಇಡೀ ದೇಶದಲ್ಲಿ ಮಾರ್ಚ್‍ನಿಂದ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಆರ್ಥಿಕವಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಬ್ಯಾಂಕ್ ಶುಲ್ಕ ಹಾಗೂ ಸಾಲದ ಕಂತುಗಳನ್ನು ಆಗಸ್ಟ್ ಅಂತ್ಯದವರಗೆ ತಡೆಹಿಡಿಯುವಂತೆ ಮಾನ್ಯ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಆದೇಶಿಸಿದ್ದಾರೆ.
ಆದರೆ ಬಡ ಜನರು ಇನ್ನೂ ಆರ್ಥಿಕವಾಗಿ ಚೇತರಿಸಿಕೊಳ್ಳಬೇಕಾಗಿದ್ದು, ಕೆಲವು ಕೈಗಾರಿಕೆಗಳು ಹಾಗೂ ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕ್ ಶುಲ್ಕ ಹಾಗೂ ಸಾಲದ ಕಂತುಗಳನ್ನು ಡಿಸೆಂಬರ್ ಅಂತ್ಯದವರೆಗೆ ತಡೆಹಿಡಿಯುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಕಳ ಶಾಸಕ ಹಾಗೂ ಸರಕಾರಿ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಅವರು ಲಿಖಿತವಾಗಿ ಮನವಿ ಸಲ್ಲಿಸಿರುತ್ತಾರೆ.


















