ಗಣೇಶೋತ್ಸವ ಹಿನ್ನೆಲೆ ಪೊಲೀಸ್‌ ಠಾಣೆ ವತಿಯಿಂದ ಸಭೆ

0

ಕಾರ್ಕಳ, ಆ.17 : ಗಣೇಶೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯುಳಿದಿದೆ. ಈ ವರ್ಷ ಕೊರೊನಾ ವೈರಸ್‌ ಸೋಂಕಿನ ಕಾರಣದಿಂದ ಗಣೇಶೋತ್ಸವವನ್ನು   ಅದ್ಧೂರಿಯಾಗಿ ಆಚರಿಸುವ ಬದಲು ಸರಕಾರ ರೂಪಿಸಿದ ಮಾರ್ಗಸೂಚಿ ಪ್ರಕಾರ ಅಚರಿಸುವಂತೆ ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌ ಮನವಿ ಮಾಡಿಕೊಂಡರು.

ಅವರು ಆ. 17ರಂದು ಕಾರ್ಕಳ ಪೊಲೀಸ್‌ ಠಾಣೆ ವತಿಯಿಂದ ಕಿಸಾನ್‌ ಸಭಾದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರಕಾರದ ಮಾರ್ಗಸೂಚಿ ಪ್ರಕಾರವೇ ಗಣೇಶೋತ್ಸವ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಹಕರಿಸಬೇಕೆಂದರು. ಕಾರ್ಕಳ ನಗರ ಪೊಲೀಸ್‌ ಠಾಣೆ ಎಸ್‌ಐ ಮಧು ಬಿ.ಇ., ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ನಾಸಿರ್‌ ಹುಸೇನ್‌, ಕ್ರೈಂ ವಿಭಾಗದ ಎಸ್‌ಐ ದಾಮೋದರ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸರಕಾರದ ಮಾರ್ಗಸೂಚಿ ಹೀಗಿದೆ

ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಗಳಲ್ಲಿಯೇ ಆಚರಿಸಬೇಕು.
ಸಾರ್ವಜನಿಕ ಸ್ಥಳ (ರಸ್ತೆ, ಗಲ್ಲಿ, ಓಣಿ, ಮೈದಾನ) ಗಳಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು.
ಯಾವ ಕಾರಣಕ್ಕೂ ನದಿ, ಕೆರೆ, ಕೊಳ, ಬಾವಿಗಳಲ್ಲಿ ಗಣೇಶ ವಿಗ್ರಹ ವಿಸರ್ಜನೆ ಮಾಡುವಂತಿಲ್ಲ.
ಗಣೇಶ ಮೂರ್ತಿಯನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಮೆರವಣಿಗೆ ಮಾಡುವಂತಿಲ್ಲ. ಮೆರವಣಿಗೆ ಸಂಪೂರ್ಣ ನಿರ್ಬಂಧಿಸಲಾಗಿದೆ.
ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜಿಸಬೇಕು.
ಶ್ರೀ ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸ್‌ ಮಾಡುವುದು. ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸ್ಯಾನಿಟೈಸರ್‌ ಹಾಗೂ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಕಡ್ಡಾಯ. ಜತೆಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವಿರಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಕೊರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಇದಲ್ಲದೆ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಮಾರ್ಗಸೂಚಿಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು.
ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರದ ಆದೇಶ/ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 188ರಡಿ ಕಾನೂನು ಕ್ರಮ ಜರುಗಿಸಲಾಗುವುದು.---
Previous articleಕಾಶ್ಮೀರ : ಪುಲ್ವಾಮ ಮಾದರಿ ಸಂಚು ವಿಫಲ
Next articleಪೆರ್ವಾಜೆ ಶಾಲಾ ವಿದ್ಯಾರ್ಥಿ ಅದ್ವೈತ್‌ ಅವರಿಗೆ ಸನ್ಮಾನ

LEAVE A REPLY

Please enter your comment!
Please enter your name here