ದಿಲ್ಲಿ, ಆ. 16: ಕಳೆದ ಜನವರಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹಿಮದ ಕೊರಕಲಿಗೆ ಬಿದ್ದು ನಾಪತ್ತೆಯಾಗಿದ್ದ ಯೋಧ ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿಯ (36) ಮೃತದೇಹ ಶನಿವಾರ ಪತ್ತೆಯಾಗಿದೆ.
ಸೇನೆಯ 11 ಗಢ್ವಾಲ್ ರೈಫಲ್ಸ್‌ನ ಯೋಧರಾಗಿದ್ದ ನೇಗಿ ಜ.8ರಂದು ಗುಲ್ಮಾರ್ಗದಲ್ಲಿ ಕರ್ತವ್ಯದಲ್ಲಿರುವಾಗ ಆಕಸ್ಮಿಕವಾಗಿ ಜಾರಿ ಹಿಮದ ಕೊರಕಲಿಗೆ ಬಿದ್ದಿದ್ದರು.
ಮೃತದೇಹ ಪತ್ತೆಯಾಗದ ಕಾರಣ ಸೇನೆ ನೇಗಿಯನ್ನು ಹುತಾತ್ಮ ಎಂದು ಘೋಷಿಸಿ ಜೂ.21ರಂದು ಅವರ ಮನೆಯವರಿಗೆ ಈ ವಿಚಾರವನ್ನು ತಿಳಿಸಿತ್ತು. ಆದರೆ ನೇಗಿಯ ಪತ್ನಿ ಮೃತದೇಹ ನೋಡುವ ತನಕ ಗಂಡ ಸಾವನ್ನಪ್ಪಿರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಹಿಮದಡಿಯಲ್ಲಿದ್ದ ಮೃತದೇಹವನ್ನು ಒಮ್ಮೆಲೆ ಹೊರಗಿನ ವಾತಾವರಣಕ್ಕೆ ಒಡ್ಡಿದರೆ ಕೆಡುವ ಸಾಧ್ಯತೆಯಿರುವುದರಿಂದ ವೈದ್ಯಕೀಯ ಸಂಸ್ಕರಣೆಗೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. 2-3 ದಿನದಲ್ಲಿ ಮೃತದೇಹವನ್ನು ಕುಟುಂಬದವರಿಗೆ ಬಿಟ್ಟುಕೊಡಲಾಗುವುದು ಎಂದು ಸೇನೆಯ ಮೂಲಗಳು ತಿಳಿಸಿವೆ.
ಕಾಲು ಜಾರಿ ಬಿದ್ದ ನೇಗಿಯ ಮೃತದೇಹ ಸಿಗದಾದಾಗ ಅವರು ಪಾಕಿಸ್ಥಾನದ ಕಡೆಗೆ ಬಿದ್ದಿರಬೇಕೆಂದು ಭಾವಿಸಲಾಗಿತ್ತು. 2001ರಲ್ಲಿ ಸೇನೆಗೆ ಸೇರಿದ ನೇಗಿ ಡೆಹ್ರಾಡೂನ್ ಸಮೀಪದವರು. ಅವರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ.

































































