74ನೇ ಸ್ವಾತಂತ್ರ್ಯೋತ್ಸವ ಆಚರಣೆ: ಕಾರ್ಲ ಕಜೆ-ಬಿಳಿ ಬೆಂಡೆ ಬ್ರ್ಯಾಂಡ್‌- ಸುನಿಲ್‌ ಕುಮಾರ್‌ ಘೋಷಣೆ

0

ಕಾರ್ಕಳ : ಭಾರತವನ್ನು ಸಶಕ್ತ, ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಕರೆ ಪೂರಕ. ಈ ನಿಟ್ಟಿನಲ್ಲಿ ನಮ್ಮ ಕಾರ್ಕಳವನ್ನು ಗ್ರಾಮ ಮಟ್ಟದಿಂದಲೇ ಸಶಕ್ತ, ಸ್ವಾವಲಂಬಿಗೊಳಿಸುವಲ್ಲಿ ಹಲವಾರು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅವರು ಆ. 15ರಂದು ಕಾರ್ಕಳ ಗಾಂಧಿ ಮೈದಾನದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ಯ್ಯ ದೊರೆಯುವಲ್ಲಿ ಮಹಾತ್ಮರ ತ್ಯಾಗ-ಬಲಿದಾನವಿದೆ. ಸ್ವಾತಂತ್ರ್ಯ ದೊರೆತು ಹಲವು ದಶಕಗಳ ಬಳಿಕ ಭಾರತ ಬಲು ದೊಡ್ಡ ಶಕ್ತಿಯಾಗಿ ಬೆಳೆದಿದೆ. ಹತ್ತಾರು ದೇಶಗಳಿಗೆ ಮಾರ್ಗದರ್ಶಕವಾಗಿಯೂ ಗುರುತಿಸಿಕೊಂಡಿದೆ. ಇದಕ್ಕೆ ನಾವೆಲ್ಲರೂ ಕಾರಣೀಭೂತರಾಗಿದ್ದೇವೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಕಾರ್ಲದ ಕಜೆ- ಬಿಳಿ ಬೆಂಡೆ ಕಾರ್ಕಳದ ಬ್ರ್ಯಾಂಡ್‌

ಕೃಷಿ ಕಾರ್ಯದಲ್ಲಿ ಕಾರ್ಕಳ ಉಳಿದ ತಾಲೂಕುಗಳಿಗೆ ಮಾದರಿಯಾಗಬೇಕೆಂಬ ಕಲ್ಪನೆಯಲ್ಲಿ ಕಾರ್ಕಳ ಕಜೆ ಅಕ್ಕಿ ಮತ್ತು ಬಿಳಿ ಬೆಂಡೆಯನ್ನು ದೇಶಾದ್ಯಂತ ಬ್ರ್ಯಾಂಡ್‌ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಾರ್ಕಳದ ರೈತರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಕಾರ್ಕಳದ ಕಜೆ ಅಕ್ಕಿ ಮತ್ತು ಬಿಳಿ ಬೆಂಡೆಯನ್ನು ವ್ಯಾಪಕವಾಗಿ ಬೆಳೆಯುವ ನಿಟ್ಟಿನಲ್ಲಿ ಅಭಿಯಾನ ಮಾಡಲಾಗುವುದು. ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು, ಕೃಷಿಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಸುನಿಲ್ ಕುಮಾರ್‌ ಹೇಳಿದರು.

ತಹಶೀಲ್ದಾರ್‌ ಸಂದೇಶ

ಧ್ವಜಾರೋಹಣಗೈದ ತಹಶೀಲ್ದಾರ್‌ ಪುರಂದರ ಹೆಗ್ಡೆ ಮಾತನಾಡಿ, ಮಹಾತ್ಮರ ಹೋರಾಟ, ಬಲಿದಾನದಿಂದಾಗಿ ಸ್ವಾತಂತ್ರ್ಯ ದೊರೆತಿದೆ. ಅವರ ಆದರ್ಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಸ್ಮರಿಸುವ ಕಾರ್ಯವಾಗಬೇಕು ಎಂದರು. ಸರಕಾರದ ಯೋಜನೆ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ನಾಗರಿಕರು ಸರಿಯಾದ ರೀತಿಯಲ್ಲಿ ತೆರಿಗೆ ಪಾವತಿಸುವ ಮೂಲಕ ದೇಶ ಕಟ್ಟುವ ಕಾರ್ಯವಾಗಬೇಕು ಎಂದು ತಹಶೀಲ್ದಾರ್‌ ಹೇಳಿದರು.

ಶ್ಲಾಘನೆ

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶಾಸಕರು, ಕಾರ್ಕಳದ ವೈದ್ಯರು, ದಾದಿಯರ, ಸರಕಾರಿ ಇಲಾಖಾ ಅಧಿಕಾರಿ, ಸಿಬ್ಬಂದಿ, ಸ್ವಯಂ ಸೇವಕರ, ಕಾರ್ಕಳದ ಜನತೆ ಕಾರ್ಯ ಶ್ಲಾಘನೀಯವೆಂದು ಬಣ್ಣಿಸಿದ ತಹಶೀಲ್ದಾರ್‌, ಎಲ್ಲರೂ ಅತ್ಯುತ್ತಮ ರೀತಿಯಲ್ಲಿ ಸಹಕರಿಸಿದ ಫಲವಾಗಿ ಕೊರೊನಾ ಕಾರ್ಕಳವನ್ನು ದೊಡ್ಡದಾಗಿ ಬಾಧಿಸಿಲ್ಲವೆಂದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಮೇ. ಹರ್ಷ ಕೆ.ಬಿ., ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಡಿವೈಎಸ್‌ಪಿ ಭರತ್ ರೆಡ್ಡಿ, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ನಗರ ಠಾಣೆ ಎಸ್‌.ಐ ಮಧು ಬಿ.ಇ., ಗ್ರಾಮಾಂತರ ಠಾಣೆ ಎಸ್‌ಐ ನಾಸಿರ್‌ ಹುಸೇನ್‌, ಎಪಿಎಂಸಿ ಅಧ್ಯಕ್ಷರು, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಪುರಸಭಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೊರೊನಾ ವಾರಿಯರ್ಸ್‌ ಆಗಿ ಕಾರ್ಯನಿರ್ವಹಿಸಿದ ಸುಮಾರು 52 ಮಂದಿಯನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್.‌ ಸ್ವಾಗತಿಸಿ, ಶಿಕ್ಷಕಿ ಸೀಮಾ ಕಾಮತ್‌, ಪೂರ್ಣಿಮಾ ಪ್ರಾರ್ಥಿಸಿದರು. ಶಿಕ್ಷಕರಾದ ಸಂಜಯ್‌ ಕುಮಾರ್,‌ ಗಣೇಶ್‌ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು.

 

 

 

 

 ---
Previous articleಕೊರೊನಾಕ್ಕೆ ಸಿದ್ಧವಾಗುತ್ತಿದೆ 3 ಲಸಿಕೆ : ಮೋದಿ
Next articleಪ್ರಣವ್‌ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

LEAVE A REPLY

Please enter your comment!
Please enter your name here