
ದಿಲ್ಲಿ, ಆ. 15: ಕೊರೊನಾ ವೈರಸ್ ಗೆ ನಮ್ಮ ದೇಶದಲ್ಲೇ ಮೂರು ಲಸಿಕೆಗಳು ತಯಾರಾಗುತ್ತಿದ್ದು, ಪರೀಕ್ಷೆಯ ವಿವಿಧ ಹಂತಗಳಲ್ಲಿ ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದಾರೆ.
ಪ್ರತಿ ಭಾರತೀಯನಿಗೆ ಲಸಿಕೆ ಸಿಗುವಂತೆ ಮಾಡಲಿದ್ದೇವೆ. ಲಸಿಕೆಯ ಉತ್ಪಾದಿಸಲು ಮತ್ತು ನ್ಯಾಯಸಮ್ಮತ ರೀತಿಯಲ್ಲಿ ವಿತರಿಸಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜ್ಞಾನಿಗಳು ಅನುಮತಿ ನೀಡಿದ ಕೂಡಲೇ ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಾಗಲಿದೆ. ನಮ್ಮ ವಿಜ್ಞಾನಿಗಳು ಋಷಿ ಮುನಿಗಳಂಥ ಪ್ರತಿಭೆ ಹೊಂದಿದ್ದಾರೆ ಮತ್ತು ಲಸಿಕೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದರು.
ಕೊರೊನಾ ಪಿಡುಗಿನ ಕಾಲದಲ್ಲಿ ಪ್ರತಿಯೊಬ್ಬರು ಲಸಿಕೆ ಯಾವಾಗ ತಯಾರಾಗುತ್ತದೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.ನಮ್ಮ ವಿಜ್ಞಾನಿಗಳು ಋಷಿ ಮುನಿಗಳಂಥ ಜ್ಞಾನ ಹೊಂದಿದ್ದಾರೆ ಮತ್ತು ಲಸಿಕೆ ತಯಾರಿಸಲು ಭಾರಿ ಶ್ರಮಪಡುತ್ತಿದ್ದಾರೆ. ಮೂರು ಲಸಿಕೆಗಳ ತಯಾರಿಯ ವಿವಿಧ ಹಂತಗಳಲ್ಲಿವೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದರು.
ಎಲ್ಲರಿಗೆ ಅರೋಗ್ಯ ಐಡಿ
ಪ್ರತಿಯೊಬ್ಬರಿಗೆ ಆರೋಗ್ಯ ಗುರುತಿನ ಕಾರ್ಡ್ ನೀಡುವ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಶನ್ ಅನ್ನು ಸರಕಾರ ಶೋಘ್ರವೇ ಘೋಷಿಸಲಿದೆ. ಇದು ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಲಿದೆ. ಪ್ರತಿ ಸಲ ವೈದ್ಯರ ಬಳಿಗೆ ಅಥವಾ ಔಷಧಿ ಅಂಗಡಿಗೆ ಹೋದಾಗ ಈ ಕಾರ್ಡಿನಲ್ಲಿ ಆರೋಗ್ಯ ಮಾಹಿತಿ ಪರಿಷ್ಕರಣೆಯಾಗುತ್ತದೆ . ಪ್ರತಿ ಭಾರತೀಯನ ಬಳಿ ಈ ಕಾರ್ಡ್ ಇರುತ್ತದೆ ಮತ್ತು ಅದರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಪ್ರತಿ ಮಾಹಿತಿ ಇರುತ್ತದೆ ಎಂದು ತಿಳಿಸಿದ್ದಾರೆ.