ಚಿನ್ನದ ಬೆಲೆಯಲ್ಲಿ ಹಾಲು,ಪನೀರ್ ಕಸ್ತೂರಿ ಬಲ್ಲುದೇ ಕತ್ತೆ ಹಾಲಿನ ಬೆಲೆಯ…

ಶೀರ್ಷಿಕೆ ನೋಡಿ ಗಲಿಬಿಲಿಯಾದಿರಾ? ಅಥವಾ ನನಗೆ ಗಾದೆ ಮಾತು ಸರಿ ಗೊತ್ತಿಲ್ಲ ಎಂದು ತೀರ್ಮಾನಿಸಿದಿರಾ? ಈಗ ಕಾಲ ಆ ರೀತಿ ಬದಲಾಗುತ್ತಿದೆ. ಇನ್ನು ಮುಂದೆ ನಿಮ್ಮನ್ನು ಯಾರಾದರೂ ಕತ್ತೆ ಎಂದು ಜರೆದರೆ ತಲೆಕೆಡಿಸಿಕೊಳ್ಳ ಬೇಡಿ.ಯಾಕೆ ಗೊತ್ತಾ? ಕತ್ತೆಗೊಂದು ಕಾಲ ಬಂದಿದೆ.ಅವುಗಳಿಗೂ ಮಾನ ಮರ್ಯಾದೆ ಯಾನೆ ಬೇಡಿಕೆ ಬರತೊಡಗಿದೆ.ಇನ್ನು ಮನೆಮನೆಯ ಕೊಟ್ಟಿಗೆಯಲ್ಲಿ ಆಕಳುಗಳಿಗಿಂತ ಕತ್ತೆಗಳ ಸಂಖ್ಯೆ ಹೆಚ್ಚಾದರೂ ಆಶ್ಚರ್ಯವಿಲ್ಲ.

ಕತ್ತೆಯ ಹಾಲು ಲೀಟರಿಗೆ ಎರಡರಿಂದ ಏಳು ಸಾವಿರ ರೂಪಾಯಿ ಹಾಗೂ‌ ಅದರಿಂದ ತಯಾರಿಸಿದ ಪನೀರ್ ಬೆಲೆ‌ ಎಂಭತ್ತು ಸಾವಿರ ರೂಪಾಯಿ ಇದೆಯಂತೆ.

ಹಾಗಿರುವಾಗ ದನ,ಎಮ್ಮೆ,ಆಡುಗಳಿಗಿಂತ ಕತ್ತೆಗಳನ್ನೇ ಸಾಕಿ ಭರ್ಜರಿ ಹಣ ಸಂಪಾದನೆ ಮಾಡಬಹುದಲ್ಲವೇ? ನೆನಪಿಡಿ ಒಂದು ಲೀಟರ್ ಹಾಲು ಕೂಡಾ ಒಂದು ಕತ್ತೆಯಿಂದ ಸಿಗುವುದಿಲ್ಲ.

ಹಿಸಾರ್ ನಲ್ಲಿ ರಾಷ್ಟ್ರೀಯ ಅಶ್ವ ಅನುಸಂಧಾನ (ಎನ್ ಆರ್ ಸಿ ಎ) ಸಂಸ್ಥೆ  ಕತ್ತೆ ಹಾಲು ಉತ್ಪಾದನಾ ಕೇಂದ್ರವನ್ನು  ತೆರೆಯಲು ತಯಾರಿ ನಡೆಸುತ್ತಿದೆ.ಇಲ್ಲಿ ಕೇವಲ ಹಲಾರಿ ತಳಿಯ ಕತ್ತೆಯ ಹಾಲನ್ನು  ಸ್ವೀಕರಿಸಲಾಗುವುದು.ಮೊದಲು ಹತ್ತು ಹಲಾರಿ ತಳಿಯ ಕತ್ತೆಗಳನ್ನು ತರಿಸಿಕೊಂಡಿದೆ.ಸದ್ಯ ಇವುಗಳ ಬ್ರೀಡಿಂಗ್( ಸಂತಾನಾಭಿವೃದ್ಧಿ) ಕಾರ್ಯ ನಡೆಯುತ್ತಿದೆ.ಹಲಾರಿ ತಳಿ ಹೆಚ್ಚಾಗಿ ಗುಜರಾತ್ ನಲ್ಲಿ ಕಾಣ ಸಿಗುತ್ತವೆ.

ಕತ್ತೆಯ ಹಾಲು ಪನೀರ್ ಗೆ ಇಷ್ಟು ಬೆಲೆ ಯಾಕೆ ಗೊತ್ತಾ? ಮೊದಲನೆಯದಾಗಿ ಒಂದು ಕತ್ತೆಯಿಂದ ಹಾಲು ಲಭಿಸುವುದು ಕಡಿಮೆ.ಜತೆಗೆ ಈ ಹಾಲಿನಲ್ಲಿರುವ ಔಷಧೀಯ ಗುಣ.ಕ್ಯಾನ್ಸರ್, ಧಡೂತಿ ದೇಹ,ಅಲರ್ಜಿಯಂತಹ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಈ ಹಾಲಿನಲ್ಲಿದೆ.

ಆಕಳ ಹಾಲು ಕೆಲ ಮಕ್ಕಳಿಗೆ ಅಲರ್ಜಿಯನ್ನುಂಟು ಮಾಡುತ್ತದೆ.ಆದರೆ ಕತ್ತೆ ಹಾಲು ಯಾವುದೇ ರೀತಿಯ ಅಲರ್ಜಿಯನ್ನು ಉಂಟು ಮಾಡುವುದಿಲ್ಲ.ಇದರಲ್ಲಿ  ಆನ್ಟಿ ಆಕ್ಸಿಡೆಂಟ್,ಆಂಟಿ(anti) ಏಜಿಂಗ್ ಗುಣಲಕ್ಷಣಗಳನ್ನು ಕಂಡು ಹಿಡಿಯಲಾಗಿದೆ.ಕೊಬ್ಬಿನಾಂಶ ಬಹಳ ಕಡಿಮೆ ಮಟ್ಟದಲ್ಲಿದೆ.ಈ ಹಾಲನ್ನು ಸಾಬೂನು, ಲಿಪ್ ಬಾಮ್,ಬಾಡಿಲೋಶನ್ ತಯಾರಿಯಲ್ಲೂ ಉಪಯೋಗಿಸಲಾಗುತ್ತಿದೆ.

ಏಳಿಂಜೆ ನಾಗೇಶ್,ಮುಂಬಯಿ













































error: Content is protected !!
Scroll to Top