
ಧಾರವಾಡ, ಆ. 10: ಅಮ್ಮನ ಆರೋಗ್ಯ ಸುಧಾರಿಸುವಂತೆ ಪ್ರಾರ್ಥಿಸಿ ಗ್ರಾಮದ ದೇವರಿಗೆ ಪೂಜೆ ಸಲ್ಲಿಸಲು ತೆರಳಿದ್ದ 8 ನೇ ತರಗತಿಯ ಬಾಲಕಿಯ ಮೇಲೆ, ಪರಿಚಯದವನೇ ಆಗಿದ್ದ ಬಶೀರ್ ಎಂಬ ಯುವಕ ಅತ್ಯಾಚಾರ ಎಸಗಿದ ಕೃತ್ಯದಿಂದ ಮಾನಸಿಕವಾಗಿ ನೊಂದು ಅತ್ಮಹತ್ಯೆ ಮಾಡಿಕೊಂಡ ಬಾಲಕಿಯ ಪ್ರಕರಣಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಬಾಲಕಿ ವಿಚಾರವನ್ನು ಪೋಷಕರಿಗೆ ತಿಳಿಸಿ , ವಿಷ ಕುಡಿದಿದ್ದಳು. ಆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು.ಆರೋಪಿ ಬಶೀರನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಬಾಲಕಿಯ ಕುಟುಂಬಸ್ಥರನ್ನು ಭೇಟಿ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಂತ್ವನ ಹೇಳಿ, ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಣ್ಣೀರು ಸುರಿಸಿರುವ ಹೆತ್ತವರು, ಈ ವಿಚಾರದಿಂದ ಮಗಳು ಸಾಕಷ್ಟು ನೊಂದಿದ್ದಳು. ಆರೋಪಿಗೆ ತಕ್ಕ ಪಾಠ ಕಲಿಸೋಣ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರೂ, ಮಗಳು ಕೀಟ ನಾಶಕ ಸೇವಿಸಿ ಕೊನೆಯುಸಿರೆಳೆದಿದ್ದಾಳೆ. ಆಕೆಯ ಸಾವಿಗೆ ನ್ಯಾಯ ದೊರಕಬೇಕಾದರೆ ಆರೋಪಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜೋಶಿ, ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಗೆ ಕಠಿಣ ಶಿಕ್ಷೆಯೂ ಆಗಲಿದ್ದು, ಬಾಲಕಿಯ ಕುಟುಂಬ ವರ್ಗಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಭದ್ರತೆ ನೀಡಲಾಗುತ್ತದೆ. ಏನೇ ಸಮಸ್ಯೆಗಳು ಎದುರಾದರೂ ಪೊಲೀಸರಿಗೆ ತಿಳಿಸುವಂತೆ ಸೂಚಿಸಿದ್ದಾರೆ. ಜೊತೆಗೆ ವೈಯಕ್ತಿಕವಾಗಿ ಮತ್ತು ಶಾಸಕ ಅಮೃತ ದೇಸಾಯಿ ಸೇರಿ ಶೀಘ್ರವೇ 1 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ
ಘಟನೆಯಿಂದ ಸಿಡಿದೆದ್ದಿರುವ ರಾಜ್ಯದ ಜನತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದೆ. ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಝವಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಕೂಗು ಕೇಳಿ ಬರಲಾರಂಭಿಸಿದೆ.