ಕೋಯಿಕ್ಕೋಡ್, ಆ. 8 : ಕೇರಳದ ಕಲ್ಲಿಕೋಟೆ ಕರಿಪುರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಎರಡು ಭಾಗವಾಗಿ ಹೋಗಿದ್ದು ಶನಿವಾರ ಅದರ ಬ್ಲಾಕ್ ಬಾಕ್ಸ್ ದೊರೆತಿದೆ.
ಘಟನೆಗೆ ಸಂಬಂಧಪಟ್ಟಂತೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತನಿಖೆಗೆ ಆದೇಶ ನೀಡಿದ್ದು, ಅವರು ಇಂದು ಅಪರಾಹ್ನ ಕೋಝಿಕ್ಕೋಡ್ ಗೆ ಬರುವ ನಿರೀಕ್ಷೆಯಿದೆ. ಡಿಜಿಸಿಎ, ಎಎಐಬಿ ಮತ್ತು ವಿಮಾನ ಸುರಕ್ಷತಾ ವಿಭಾಗದ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ.
ವಿಮಾನದ ದಾಖಲೆಗಳನ್ನು ಡಿಜಿಟಲ್ ಮೂಲಕ ದಾಖಲಿಸಿಕೊಳ್ಳುವ ಕಪ್ಪು ಪೆಟ್ಟಿಗೆ(ಡಿಎಫ್ ಡಿಆರ್) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್(ಸಿವಿಆರ್) ಸಿಕ್ಕಿದ್ದು, ಇವುಗಳಲ್ಲಿ ವಿಮಾನದ ದಕ್ಷತೆ, ವೇಗ, ಬ್ರೇಕಿಂಗ್, ವಿಮಾನದ ಸ್ಥಿತಿಗತಿ, ಪ್ರಯಾಣದ ವೇಳೆ ಪೈಲಟ್ ಗಳ ನಡುವೆ ನಡೆದ ಸಂಭಾಷಣೆ ದಾಖಲಾಗಿರುತ್ತದೆ.ಇವುಗಳಿಂದ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಅಪಘಾತ ಹೇಗಾಯಿತು?
ವಿಮಾನ ಹಾರಾಟ ಪತ್ತೆಹಚ್ಚುವ ಸ್ವೀಡನ್ ನ ವೆಬ್ ಸೈಟ್ ಫ್ಲೈಟ್ ರಾಡಾರ್ 24, ವಾಣಿಜ್ಯ ವಿಮಾನಗಳ ಹಾರಾಟದ ಬಗ್ಗೆ ಮಾಹಿತಿ ನೀಡುತ್ತದೆ. ಅದು ಹೇಳುವ ಪ್ರಕಾರ ಏರ್ ಇಂಡಿಯಾ ವಿಮಾನ ನಿನ್ನೆ ಅಪಘಾತಕ್ಕೀಡಾಗುವ ಮೊದಲು ಎರಡು ಬಾರಿ ಲ್ಯಾಂಡಿಂಗ್ ಆಗಲು ಯತ್ನಿಸಿತ್ತು. ವಿರುದ್ಧ ದಿಕ್ಕಿನಿಂದ ವಿಮಾನವನ್ನು ಇಳಿಸುವ ಮೊದಲು ನಿಗದಿತ ರನ್ ವೇಯಲ್ಲಿ ಇಳಿಸಲು ಪೈಲಟ್ ಗೆ ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ವಿಮಾನವು ಜಾರಿ ತಿರುಗಿ ಅಪಘಾತಕ್ಕೀಡಾಗಿದೆ.ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ಭಾರಿ ಮಳೆಯಿದ್ದುದರಿಂದ ರನ್ ವೇ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ, ಇದು ಕೂಡ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ಕೋಯಿಕ್ಕೋಡ್ ವಿಮಾನ ನಿಲ್ದಾಣ ಪರ್ವತದ ಮೇಲೆ ನಿರ್ಮಿಸಲಾಗಿದ್ದು, ರನ್ ವೇಯ ಕೊನೆಗೆ ಅಷ್ಟೊಂದು ವಿಶಾಲವಾದ ಜಾಗವಿಲ್ಲ. ಪ್ರತಿಕೂಲ ಸನ್ನಿವೇಶ ಮತ್ತು ಕೈಕೊಟ್ಟ ಹವಾಮಾನ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.