ದಿಶಾ ಸಾಲ್ಯಾನ್‌ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ

ಮುಂಬಯಿ, ಆ. 6: ಸುಶಾಂತ್ ಸಿಂಗ್ ರಜಪೂತ್‌ ಮೆನೇಜರ್‌ ಆಗಿದ್ದ ದಿಶಾ ಸಾಲ್ಯಾನ್ (25) ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದ್ದು, ಅದರಲ್ಲಿ ಕೆಲವು ಬೆಚ್ಚಿಬೀಳಿಸುವ ಅಂಶಗಳಿವೆ.
ದಿಶಾ ಜೂ.9ರಂದು ರಾತ್ರಿ 2 ಗಂಟೆಗೆ ಮುಂಬಯಿಯಲ್ಲಿ ತಾನು ವಾಸವಾಗಿದ್ದ ಬಹುಮಹಡಿ ಹೌಸಿಂಗ್‌ ಸೊಸೈಟಿಯ 14ನೇ ಮಾಳಿಗೆಯಿಂದ ಬಿದ್ದು ಮೃತಪಟ್ಟಿದ್ದಾರೆ. ಅರಂಭದಲ್ಲಿ ಇದು ಆತ್ಮಹತ್ಯೆ ಪ್ರಕರಣ ಎಂದು ಭಾವಿಸಲಾಗಿದ್ದರೂ ದಿಶಾ ಮೃತಪಟ್ಟ ನಾಲ್ಕೇ ದಿನದಲ್ಲಿ ಸುಶಾಂತ್‌ ಸಿಂಗ್‌ ಕೂಡ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಬಳಿಕ ದಿಶಾ ಸಾವಿನ ಬಗ್ಗೆ ಅನೇಕ ಸಂಶಯಗಳು ಕಾಣಿಸಿಕೊಂಡಿವೆ.
ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ?
ಇಂಡಿಯಾ ಟುಡೆ ವೆಬ್‌ ಸೈಟ್‌ ದಿಶಾ ಮರಣೋತ್ತರ ವರದಿಯನ್ನು ಪಡೆದುಕೊಂಡಿದ್ದು, ಅದರಲ್ಲಿ ದಿಶಾ ಮೈಮೇಲೆ ಅಸಹಜ ಗಾಯದ ಗುರುತುಗಳಿವೆ ಎಂದು ತಿಳಿಸಲಾಗಿದೆ. ಆದರೆ ಮುಂಬಯಿ ಪೊಲೀಸರು ಈ ಅಂಶವನ್ನು ಇಷ್ಟರ ತನಕ ಬಹಿರಂಗಪಡಿಸಿರಲಿಲ್ಲ.
ಎರಡು ದಿನದ ಬಳಿಕ ಮರಣೋತ್ತರ ಪರೀಕ್ಷೆ
ದಿಶಾ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದು ಜೂ.9ರಂದು.ಆದರೆ ಮುಂಬಯಿ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿಸಿದ್ದು ಜೂ.11ರಂದು. ಸಾವಿನ ಬಳಿಕದ ಈ ಎರಡು ದಿನದ ವಿಳಂಬವೇ ಹಲವು ಸಂಶಯಗಳಿಗೆ ಕಾರಣವಾಗಿದೆ.ಬೊರಿವಲಿಯ ಮರಣೋತ್ತರ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಭಾರಿ ಎತ್ತರದಿಂದ ಬಿದ್ದ ಪರಿಣಾಮವಾಗಿ ತಲೆಗಾದ ಗಾಯದಿಂದ ದಿಶಾ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಿದ್ದರೂ ಅದರ ಜೊತೆಗೆ ದೇಹದಲ್ಲಿ ಕೆಲವು ಅಸಹಜ ಗಾಯದ ಗುರುತುಗಳಿದ್ದವು ಎಂಬ ಉಲ್ಲೇಖವಿದೆ. ಈ ಅಂಶ ಈಗ ಹಲವು ಪ್ರಶ್ನೆಗಳನ್ನೆಬ್ಬಿಸಿದೆ.
ಬಿಜೆಪಿ ಸಂಸದ ನಾರಾಯಣ ರಾಣೆ ಕೆಲವು ದಿನಗಳ ಹಿಂದೆಯೇ ದಿಶಾ ಮೇಲೆ ಲೈಂಗಿಕ ಆಕ್ರಮಣವಾಗಿದೆ ಮತ್ತು ಇದರಲ್ಲಿ ಬಾಲಿವುಡ್ ನ ಕೆಲವು ಗಣ್ಯರಲ್ಲದೆ ಪ್ರಸ್ತುತ ಸರಕಾರದಲ್ಲಿ ಸಚಿವರಾಗಿರುವ ರಾಜ್ಯದ ಓರ್ವ ಕಿರಿಯ ರಾಜಕಾರಣಿಯೂ ಒಳಗೊಂಡಿದ್ದಾರೆ ಎಂಬ ಗಂಭೀರವಾದ ಆರೋಪವನ್ನು ಮಾಡಿದ್ದರು.
ಸಾಮಾನ್ಯವಾಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಅಸಹಜ ಸಾವಿಗೀಡಾದಾಗ ಖಾಸಗಿ ಅಂಗದ ಅಂಶವನ್ನು ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೊಳಪಡಿಸಲಾಗುತ್ತದೆ. ದಿಶಾ ಪ್ರಕರಣದಲ್ಲೂ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಇನ್ನಷ್ಟೇ ಬರಬೇಕು.
ದಿಶಾ ಜೂ.9ಕ್ಕೆ ಸಾವಿಗೀಡಾದರೆ ಸುಶಾಂತ್‌ ಜೂ.14ರಂದು ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಐದೇ ದಿನದ ಅಂತರಲ್ಲಿ ಸಂಭವಿಸಿದ ಎರಡು ಸಾವುಗಳ ನಡುವೆ ಪರಸ್ಪರ ಸಂಬಂಧ ಇದೆ ಎಂಬ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
ತಂದೆ ಹೇಳಿದ್ದು…
ಈ ನಡುವೆ ದಿಶಾ ತಂದೆ ಸತೀಶ್‌ ಸಾಲ್ಯಾನ್ ಮಗಳ ಸಾವಿನ ಬಗ್ಗೆ ಸಾಮಾಜಿಕ ಮಾಧುಗಳಲ್ಲಿ ನಾನಾ ರೀತಿಯ ಕತೆ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಮುಂಬಯಿ ಪೊಲೀಸರನ್ನು ಕೆಲ ದಿನಗಳ ಹಿಂದೆ ಆಗ್ರಹಿಸಿದ್ದಾರೆ. ದಿಶಾ ಮೇಲೆ ಲೈಂಗಿಕ ಅಕ್ರಮಣವಾಗಿರುವುದನ್ನು ನಿರಾಕರಿಸಿರುವ ಅವರು ಇವೆಲ್ಲ ಕಪೋಲಕಲ್ಪಿತ ಸುದ್ದಿಗಳು ಎಂದಿದ್ದಾರೆ. ಇದೇ ವೇಳೆ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ದಿಶಾ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ. ಆದರೆ ನಾನು ಯಾರನ್ನೂ ಅನುಮಾನಿಸುವುದಿಲ್ಲ ಎಂದು ಹೇಳಿದ್ದಾರೆ. ದಿಶಾ ಹೆತ್ತವರು ಮೂಲತಃ ಉಡುಪಿಯವರು.
ಬಿಹಾರ ಪೊಲೀಸರು ಸುಶಾಂತ್‌ ಸಾವಿನ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದಾರೆ. ಜೊತೆಗೆ ಕೇಂದ್ರ ಸರಕಾರ ಸುಶಾಂತ್‌ ಸಾವಿನ ತನಿಖೆಯನ್ನು ಸಿಬಿಐಗೊಪ್ಪಿಸಲು ಒಪ್ಪಿಕೊಂಡಿದೆ. ಸುಶಾಂತ್‌ ಸಾವಿನ ಸುತ್ತ ಇರುವ ನಿಗೂಢ ಬಗೆಹರಿದರೆ ದಿಶಾ ಸಾವಿನ ರಹಸ್ಯವೂ ಬಯಲಾಗಬಹುದು.error: Content is protected !!
Scroll to Top