ಮಧ್ಯಮ ವರ್ಗದವರೆಂಬ ತ್ರಿಶಂಕುಗಳು

ರಾಜೇಶ್ವರ್‌ ಪಾಂಚಾಲ್‌ ಸುಮಾರು ಐದು ವರ್ಷಗಳಿಂದ ಮುಂಬಯಿಯಲ್ಲಿ ವಕೀಲರಾಗಿ ದುಡಿಯುತ್ತಿದ್ದಾರೆ. ಉಪನಗರ ಕಾಂದಿವಲಿಯಲ್ಲಿ ಪತ್ನಿ , ಇಬ್ಬರು ಮಕ್ಕಳೊಂದಿಗೆ  ವಾಸವಾಗಿರುವ ಅವರು ಪ್ರತಿ ತಿಂಗಳು ಒಂದಷ್ಟು ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಅದಕ್ಕೆ ತಕ್ಕಂತೆ ಜೀವನಶೈಲಿಯನ್ನು ರೂಢಿಸಿಕೊಂಡಿದ್ದರು. ತಕ್ಕ ಮಟ್ಟಿಗೆ ಉತ್ತಮವಾಗಿರುವ ಹೌಸಿಂಗ್‌ ಸೊಸೈಟಿಯಲ್ಲಿ ಬ್ಯಾಂಕಿನಿಂದ ಸಾಲ ತೆಗೆದು ಮನೆ  ಮಾಡಿದ್ದಾರೆ.ಮಕ್ಕಳಿಬ್ಬರು ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.ಒಂದು ಮಧ್ಯಮ  ವರ್ಗದ ಕುಟುಂಬವಾಗಿ ಅವರು ನೆಮ್ಮದಿಯಿಂದಿದ್ದರು. ಆದರೆ ಅ  ನೆಮ್ಮದಿಯಿದ್ದದ್ದು ಮಾರ್ಚ್ ನಲ್ಲಿ ಲಾಕ್‌ ಡೌನ್‌  ಘೋಷಣೆಯಾಗುವ ತನಕ.

ಲಾಕ್‌ ಡೌನ್‌ ಬಳಿಕ ಕೋರ್ಟುಗಳು ಕಾರ್ಯ ಸ್ಥಗಿತಗೊಳಿಸಿದ ಕಾರಣ ಪಾಂಚಾಲರ ಆದಾಯ ಮೂಲಗಳೆಲ್ಲ  ಮುಚ್ಚಿಹೋಗಿವೆ. ಈಗ ಹೌಸಿಂಗ್‌ ಸೊಸೈಟಿಯ ಮೈಂಟೆನೆನ್ಸ್‌ ಕಟ್ಟಲು ಕೂಡ ಹಣವಿಲ್ಲದೆ ಪರದಾಡುತ್ತಿದ್ದಾರೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ಮನೆಯಲ್ಲಿ ಒಂದು ವಾರಕ್ಕೆ ಬೇಕಾಗುವಷ್ಟು ಮಾತ್ರ ರೇಶನ್‌  ಉಳಿದಿದೆ. ಮಕ್ಕಳನ್ನು ದೊಡ್ಡ ಶಾಲೆಗಳಿಂದ ಬಿಡಿಸಿ ಚಿಕ್ಕ ಶಾಲೆಗೆ ಹಾಕುವ ಬಗ್ಗೆ ಯೋಚಿಸುತ್ತಿದ್ದಾರೆ ಪಾಂಚಾಲ್. ಫೋರ್ಟ್‌ ಪರಿಸರದಲ್ಲಿರುವ ಕಚೇರಿಯ ಬಾಡಿಗೆ ಪಾವತಿಸಲಾಗದೆ ಅದನ್ನು ಬಿಡಲು ತೀರ್ಮಾನಿಸಿದ್ದಾರೆ. ತಿಂಗಳ 7,000 ರೂ.ಇಎಮ್‌ಐ ಕಟ್ಟಲು ಹಣ ಇಲ್ಲ. ಜೊತೆಗೆ ಹೆಂಡತಿಯ ಆರೋಗ್ಯವೂ ಆಗಾಗ ಕೈಕೊಡುತ್ತಿದೆ. ಈಗಾಗಲೇ ಎರಡು ಸರ್ಜರಿ ಆಗಿರುವ ಅವರ ಸ್ಥಿತಿ ಬಹಳ ನಾಜೂಕಾಗಿದೆ.

ದಿಂಡೋಶಿ ಕೋರ್ಟ್‌ ನಲ್ಲಿ ಜೂನಿಯರ್‌ ವಕೀಲರಾಗಿರುವ ಧನಂಜಯ್‌ ಸಿಂಗ್‌ ತಿಂಗಳಿಗೆ 20,000-25,000 ಗಳಿಸುತ್ತಿದ್ದರು. ಲಾಕ್‌ ಡೌನ್‌  ಬಳಿಕ ಅವರ ಈ ಗಳಿಕೆಗೆ ಕಲ್ಲು ಬಿದ್ದಿದೆ. ಈಗ ಉತ್ತರಪ್ರದೇಶದಲ್ಲಿರುವ ತಂದೆ ಕಳುಹಿಸುವ ಚಿಲ್ಲರೆ ಹಣದಲ್ಲಿ ದಿನ ದೂಡುತ್ತಿದ್ದಾರೆ. ಇದು ಪಾಂಚಾಲ್‌ ಮತ್ತು ಸಿಂಗ್‌ ಇಬ್ಬರ ಕತೆಯಲ್ಲ.ಮಧ್ಯಮ ವರ್ಗದ ಎಲ್ಲರ ಸ್ಥಿತಿಯೂ ಹೆಚ್ಚುಕಮ್ಮಿ ಇದೇ ರೀತಿ ಇದೆ.

ಕೊರೊನಾ ಆರ್ಥಿಕವಾಗಿ ಅತಿ ಹೆಚ್ಚು ಕಾಡಿದ್ದು ಮಧ್ಯಮ ಮತ್ತು ಮೇಲ್ಮಧ್ಯಮ  ವರ್ಗದವರನ್ನು.ಇದ್ದ ಗಳಿಕೆಯಲ್ಲೇ ಕಾಲಿಗೂ ತಲೆಗೂ ಎಳೆದು,ಇಎಂಐಗಳಲ್ಲಿ ಬದುಕುತ್ತಾ,  ಅಲ್ಲಿಂದಲ್ಲಿಗೆ ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದ  ಇವರಿಗೆ ಸರಕಾರದಿಂದ ಯಾವ ನೆರವೂ ಸಿಕ್ಕಿಲ್ಲ, ದಾನಿಗಳ ನೆರವು ಪಡೆದುಕೊಳ್ಳಲು ಬಿಗುಮಾನ ಬಿಡುತ್ತಿಲ್ಲ. 25,000-35,000 ಗಳಿಸುತ್ತಿದ್ದವರೆಲ್ಲ ಅತ್ತ ಬದುಕಲೂ ಆಗದೆ ಇತ್ತ ಸಾಯಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

‌    

Latest Articles

error: Content is protected !!