Tuesday, December 6, 2022
spot_img
Homeರಾಜ್ಯಇಂದು ಕೋಟಿ ಕಂಠ ಗಾಯನ: 1.15 ಕೋಟಿ ಜನರಿಂದ ನೋಂದಣಿ - ಜನಮನ ಸೆಳೆದ ವಿನೂತನ...

ಇಂದು ಕೋಟಿ ಕಂಠ ಗಾಯನ: 1.15 ಕೋಟಿ ಜನರಿಂದ ನೋಂದಣಿ – ಜನಮನ ಸೆಳೆದ ವಿನೂತನ ಅಭಿಯಾನ

ಬೆಂಗಳೂರು : ಕನ್ನಡ ರಾಜ್ಯೋತ್ಸವದ ಹೊಸಿಲಿನಲ್ಲಿ ಕರ್ನಾಟಕ ಸರ್ಕಾರ ಆಯೋಜಿಸಿರುವ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ಆನ್​ಲೈನ್ ಮತ್ತು ಅಫ್​ಲೈನ್ ಅಭಿಯಾನದಿಂದ ಪ್ರೇರೇಪಿತರಾಗಿರುವ ಸಾವಿರಾರು ಜನರು ಗೀತ ಗಾಯನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 50 ಸಾವಿರ ಜನರು ಆಯ್ದ 6 ಹಾಡುಗಳನ್ನು ಸಾಮೂಹಿಕವಾಗಿ ಹಾಡಲಿದ್ದಾರೆ. ಬೆಂಗಳೂರಿನ ವಿಧಾನಸೌಧ ಮೆಟ್ಟಿಲು, ಎಲ್ಲ ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು, ಆಟೊ ತಂಗುದಾಣಗಳು, ಕಾರಾಗೃಹ, ಐಟಿಬಿಟಿ ಸಂಸ್ಥೆಗಳು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಲಾಲ್​ಬಾಗ್​ಗಳಲ್ಲಿ ಗೀತ ಗಾಯನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾರ್ಯಕ್ರಮ ರೂಪಿಸುವಂತೆ ಶಾಸಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಲಹೆ ಮಾಡಿದೆ. ಮೈಸೂರು ಅರಮನೆ, ಚಿತ್ರದುರ್ಗದ ಕೋಟೆ, ಮಂಗಳೂರು ಕಡಲತೀರ, ತುಮಕೂರು ಸಿದ್ದಗಂಗಾ ಮಠ, ಪ್ರವಾಸಿ ತಾಣಗಳಾದ ಶೃಂಗೇರಿ, ಹಂಪಿ, ಬೇಲೂರು, ಪಾವಗಡದ ಸೌರಶಕ್ತಿ ಘಟಕ, ರಾಯಚೂರು ಉಷ್ಣವಿದ್ಯುತ್ ಸ್ಥಾವರ, ಮಣಿಪಾಲದ ಕೆಎಂಸಿ, ಹುಬ್ಬಳ್ಳಿಯ ಕಿಮ್ಸ್​ ಸೇರಿದಂತೆ ಹಲವೆಡೆ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ.
ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿಯೂ ಕನ್ನಡಾಭಿಮಾನಿಗಳು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದರ ಜೊತೆಗೆ ವೈಯಕ್ತಿಕ ಮಟ್ಟದಲ್ಲಿಯೂ ಸಾಕಷ್ಟು ಜನರು ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಅಭಿಯಾನಕ್ಕಾಗಿ ಸರ್ಕಾರವು ರೂಪಿಸಿರುವ ಪೋರ್ಟಲ್ ಮತ್ತು ಫೇಸ್​ಬುಕ್ ಪುಟವು ಜನರ ಗಮನ ಸೆಳೆದಿದ್ದು, ನೋಂದಣಿ ಮಾಡಿಕೊಂಡವರ ಸಂಖ್ಯೆ ನಿನ್ನೆಯೇ (ಅ. 27) ಕೋಟಿ ದಾಟಿತ್ತು. ‘41 ದೇಶಗಳು, 27 ರಾಜ್ಯಗಳು, 18,800 ಸಂಘ-ಸಂಸ್ಥೆಗಳು, 10 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಕನ್ನಡದ ಹಾಡುಗಳು ಮೊಳಗಲಿವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.
ವಿಮಾನದಲ್ಲೂ ಕನ್ನಡ ಗಾನ
ಬೆಂಗಳೂರಿನಿಂದ ಗ್ವಾಲಿಯರ್​ಗೆ ತೆರಳಿದ ಸ್ಪೈಸ್ ಜೆಟ್ ವಿಮಾನದಲ್ಲಿ ಕನ್ನಡ ಗಾಯನ ಎಲ್ಲರ ಗಮನ ಸೆಳೆಯಿತು. ಕೋಟಿ ಕಂಠ ಗಾಯನ ಅಭಿಯಾನದ ಹಿನ್ನೆಲೆಯಲ್ಲಿ ವಿಮಾನದ ಪೈಲಟ್ ಹಾಗೂ ಪ್ರಯಾಣಿಕರು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಹಾಡಿದರು.
ಯಾವೆಲ್ಲಾ ಹಾಡು?
ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’, ಹುಯಿಲಗೋಳ ನಾರಾಯಣರಾವ್ ವಿರಚಿತ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’, ಚನ್ನವೀರ ಕಣವಿ ಅವರ ‘ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವಾ’, ಡಿ.ಎಸ್.ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ.

LEAVE A REPLY

Please enter your comment!
Please enter your name here

Most Popular

error: Content is protected !!