ಗಡಿಯಲ್ಲಿ ಭಾರತ-ಪಾಕ್‌ ಉಗ್ರ ಕಾಳಗ : 11 ಪಾಕ್‌ ಯೋಧರ ಹತ್ಯೆ

ಶ್ರೀನಗರ, ನ. 14: ದೀಪಾವಳಿ ಹಬ್ಬದ ಮುನ್ನಾದಿನ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಉಗ್ರ ಕಾಳಗ ನಡೆದಿದೆ. ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದ ಪಾಕ್‌ ಯೋಧರಿಗೆ ಭಾರತೀಯ ಯೋಧರು ಅಷ್ಟೇ ತೀವ್ರವಾಗಿ ತಿರುಗೇಟಿ ನೀಡಿದ್ದು, ಪ್ರತಿದಾಳಿಯಲ್ಲಿ 11 ಪಾಕ್‌ ಯೋಧರು ಸತ್ತಿದ್ದಾರೆ. ಭಾರತದ ಐವರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಇತರ ಮೂವರು ಬಲಿಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಗುರೇಜ್ ವಲಯದಿಂದ ಉರಿ ವಲಯದವರೆಗೂ ಪಾಕಿಸ್ಥಾನ ಪಡೆಗಳು ಹಲವಾರು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಮಾರ್ಟರ್ ಶೆಲ್’ಗಳು ಹಾಗೂ ಗುಂಡಿನ ದಾಳಿ ನಡೆಸಿವೆ.
ಉರಿ ವಲಯದ ನಂಬಾ ಎಂಬಲ್ಲಿ ನಿನ್ನೆ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಬಳಿಕ ಗುರೇಜ್ ಸೆಕ್ಟರ್ ನಲ್ಲಿ ಇಬ್ಬರು ಯೋಧರು ನಿನ್ನೆ ಹುತಾತ್ಮರಾಗಿದ್ದರು. ಘಟನೆಯಲ್ಲಿ ಕೆಲ ಯೋಧರಿಗೂ ಗಂಭೀರವಾಗಿ ಗಾಯಗಳಾಗಿದ್ದು, ಗಾಯಗೊಂಡಿದ್ದ ಯೋಧರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಕುಪ್ವಾರಾ ಜಿಲ್ಲೆಯ ಕೇರನ್ ವಲಯದಲ್ಲಿ ಉಗ್ರರು, ಪಾಕಿಸ್ಥಾನದ ಭದ್ರತಾ ಪಡೆ ನಡೆಸಿದ ಕದನ ವಿರಾಮ ಉಲ್ಲಂಘನೆ ನೆರವು ಪಡೆದು ಒಳನುಸುಳಲು ಯತ್ನಿಸಿದ್ದರು. ಇದನ್ನು ಸೇನೆ ವಿಫಲಗೊಳಿಸಿದೆ.
ಉದ್ದೇಶಪೂರ್ವಕವಾಗಿ ಪಾಕಿಸ್ಥಾನ ಪಡೆಗಳು ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ನಾಗರೀಕರು ಸಾವನ್ನಪ್ಪಿದ್ದಾರೆಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಡಿಯಲ್ಲಿದ್ದ ಎಲ್ಲಾ ಬಿಎಸ್ಎಫ್ ಘಟಕಗಳ ಮೇಲೂ ಪಾಕಿಸ್ಥಾನ ಪಡೆಗಳು ದಾಳಿ ನಡೆಸಿವೆ.
ಭಾರತ ನಡೆಸಿದ ಶೆಲ್ ದಾಳಿಯಲ್ಲಿ ಪಾಕಿಸ್ಥಾನದ ಕೆಲ ನಾಗರಿಕ ಪ್ರದೇಶಗಳೂ ಕೂಡ ಹಾನಿಗೊಳಗಾಗಿದ್ದು, ನಾಲ್ವರು ನಾಗರಿಕರೂ ಸಾವನ್ನಪ್ಪಿದ್ದಾರೆಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ಥಾನ ಮಾಧ್ಯಮಗಳಲ್ಲಿ ಹೊತ್ತಿ ಉರಿಯುತ್ತಿರುವ ಮನೆಗಳ ದೃಶ್ಯಗಳು ಪ್ರಸಾರಗೊಂಡಿವೆ.



































































































































































































































































error: Content is protected !!
Scroll to Top