1975ರಲ್ಲಿ “ಖೇಲ್ ಖೇಲ್ ಮೆ ” ಚಿತ್ರದಲ್ಲಿ ಮೊದಲ ಬಾರಿಗೆ ರಿಷಿ ಕಪೂರ್ ಮತ್ತು ನೀತು ಸಿಂಗ್ ಜೊತೆಯಾಗಿ ನಟಿಸುತ್ತಿದ್ದಾಗಲೇ ಇಬ್ಬರ ಹೃದಯದಲ್ಲೂ ಪ್ರೇಮದ ಬೀಜ ಮೊಳಕೆಯೊಡೆಯತೊಡಗಿತ್ತು. ನಂತರ ಯಶ್ ಚೋಪ್ರಾ ಅವರ ” ಕಭೀ ಕಭೀ” ಚಿತ್ರದಲ್ಲೂ ಜೊತೆಯಾಗಿ ನಟಿಸತೊಡಗಿದರು.ಅಷ್ಟೊತ್ತಿಗಾಗಲೇ ಪ್ರೇಮದ ಗಿಡ ಎತ್ತರವಾಗಿ ಬೆಳೆದಿತ್ತು.ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದ ಇವರು ಕೆಲವು ಹಿಟ್ ಚಿತ್ರಗಳನ್ನು ನೀಡಿದ್ದರು.ಇವರಿಬ್ಬರ ನಿಶ್ಚಿತಾರ್ಥ ನಡೆದ ಘಟನೆ ಕೂಡಾ ಬಹಳ ಸ್ವಾರಸ್ಯಕರವಾದುದು. ರಿಷಿ ಕಪೂರ್ ಅವರ ಅಕ್ಕ ರೀತೂ ನಂದಾರ ವಿವಾಹ ಸಮಾರಂಭ ದಿಲ್ಲಿಯಲ್ಲಿ ನಡೆಯುತ್ತಿತ್ತು.ಇಡೀ ಕಪೂರ್ ಪರಿವಾರ ಅಲ್ಲಿ ಸೇರಿತ್ತು. ನೀತು ಸಿಂಗ್ ರನ್ನೂ ಆಹ್ವಾನಿಸಲಾಗಿತ್ತು. ಸಹೋದರನನ್ನು ಕಂಡ ರಣಧೀರ್ ಕಪೂರ್ ಹೀಗೆ ಪ್ರಶ್ನಿಸತೊಡಗಿದರು. ” ನೀನು ಮದುವೆಯಾಗಿ ಮಕ್ಕಳನ್ನು ಪಡೆದು ಸಂಸಾರ ಸಾಗಿಸಲು ಬಯಸುವೆಯಾ?” ಅದಕ್ಕೆ ರಿಷಿ ‘ ಹೌದು ‘ ಎಂದು ಉತ್ತರಿಸಿದರು.” ನೀನು ನೀತುಳನ್ನು ಪ್ರೀತಿಸುತ್ತಿದ್ದೀಯಾ” ರಣಧೀರ್ ಪ್ರಶ್ನಿಸಿದರು. ” ಹೌದು” ಎಂದು ಉತ್ತರಿಸಿದರು ರಿಷಿ. ” ಬೇರೆ ಯಾರನ್ನಾದರೂ ಮದುವೆಯಾಗಲು ಬಯಸಿದ್ದೀಯಾ?” ಎಂದು ರಣಧೀರ್ ತಮ್ಮನನ್ನು ಪ್ರಶ್ನಿಸಿದರು.ರಿಷಿ ‘ ಇಲ್ಲ’ ಎಂದು ಉತ್ತರಿಸಿದರು. ” ಹಾಗಾದರೆ ನಿನ್ನ ಸಮಸ್ಯೆ ಏನು? ” ರಣಧೀರ್ ಕೇಳಿದಾಗ ರಿಷಿ ‘ ಏನೂ ಇಲ್ಲ’ ಎಂದರು. ಅದೇ ಸಮಾರಂಭದಲ್ಲಿ ಕೂಡಲೇ ನೀತು- ರಿಷಿಯ ನಿಶ್ಚಿತಾರ್ಥದ ಘೋಷಣೆ ಮಾಡಿದ ರಣಧೀರ್ ಕೂಡಲೇ ದಿಲ್ಲಿಗೆ ಬರುವಂತೆ ನೀತುರ ತಾಯಿಗೆ ಹೇಳಿದರು. ಅಂದು ಸಂಜೆಯೇ ನಿಶ್ಚಿತಾರ್ಥ ನೆರವೇರಿಸಿ ಬಿಟ್ಟರು.
ಏಳಿಂಜೆ ನಾಗೇಶ್, ಮುಂಬಯಿ-98929 80750







































































