ಕೊಯಂಬತ್ತೂರು, ಆ. 29 :ಮೂರು ದಿನಗಳ ಹಿಂದೆಯಷ್ಟೇ ಬಿಜೆಪಿ ಸೇರಿದ್ದ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಹಾಗೂ ಬಿಜೆಪಿಯ ಇತರ ಕೆಲವು ನಾಯಕರ ವಿರುದ್ಧ ಶುಕ್ರವಾರ ಕೊಯಂಬತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಣ್ಣಾಮಲೈ ಗುರುವಾರ ಕೊಯಂಬತ್ತೂರಿನ ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕೊರೊನಾ ಪ್ರಸರಣ ತಡೆಯಲು ಜಾರಿಯಲ್ಲಿದ್ದ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕೇಸು ದಾಖಲಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ನಿಯಮಗಳನ್ನು ಉಲ್ಲಂಘಿಸಿ ಸುಡುಮದ್ದು ಸಿಡಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಎಸ್‌ಐ ಸುಗಣ್ಯ ಎಂಬವರು ನೀಡಿದ ದೂರಿನ ಪ್ರಕಾರ ಅಣ್ಣಾಮಲೈ, ಬಿಜೆಪಿ ಜಿಲ್ಲಾಧ್ಯಕ್ಷ ನಂದಕುಮಾರ್ ಸೇರಿ ಹಲವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



















