ಕೊರೊನಾ ಆರೈಕೆ ಕೆಂದ್ರದಲ್ಲಿ  ಬೆಂಕಿ ಅವಘಡ : ಮೃತರ ಸಂಖ್ಯೆ  10ಕ್ಕೇರಿಕೆ  

ವಿಜಯವಾಡ, ಆ. 9 :ಕೆಲ ದಿನಗಳಿಂದೀಚೆಗೆ ದೇಶ ಬೆನ್ನಬೆನ್ನಿಗೆ ಸಂಭವಿಸುತ್ತಿರುವ ದುರ್ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಕೇರಳದ ಮುನ್ನಾರ್‌ನ ಪೆಟ್ಟಿಮುಡಿಯಲ್ಲಿ ಬೆಟ್ಟ ಕುಸಿದು 20ಕ್ಕೂ ಹೆಚ್ಚು ಸಾವು, ಕರ್ನಾಟಕದ ಕೊಡಗಿನಲ್ಲಿ ಇದೇ ಮಾದರಿಯ ದುರಂತದಲ್ಲಿ ಓರ್ವ ಮೃತಪಟ್ಟಿರುವುದು ಮತ್ತು ಇನ್ನೂ ಹಲವು ಮಂದಿ ನಾಪತ್ತೆಯಾಗಿರುವುದು,ಕೇರಳದ ಕೋಝಿಕ್ಕೋಡ್‌ನ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅವಘಡಕ್ಕೀಡಾಗಿ 18 ಮಂದಿ ಮೃತಪಟ್ಟಿರುವುದು… ಹೀಗೆ ಕೆಲವು ದಿನಗಳಿಂದ ಕೆಟ್ಟ ಸುದ್ದಿಗಳೇ ಕೇಳಿ ಬರುತ್ತಿವೆ. ಈ ಸಾಲಿಗೆ ಹೊಸ  ಸೇರ್ಪಡೆ ಇಂದು ನಸುಕಿನ ಹೊತ್ತು ಆಂಧ್ರ ಪ್ರದೇಶದ ಕೊರೊನಾ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ದುರಂತ.

ಆಂಧ್ರಪ್ರದೇಶದ ವಿಜಯವಾಡದ ಸ್ವರ್ಣ ಪ್ಯಾಲೇಸ್ ಹೊಟೇಲ್  ಅನ್ನು ಸರಕಾರ ಕೊರೊನಾ ಆರೈಕೆ ಕೇಂದ್ರವಾಗಿ ಮಾರ್ಪಾಡು  ಮಾಡಿತ್ತು. ಇಲ್ಲಿಯೇ ಭಾನುವಾರ ನಸುಕಿನ ಜಾವ ಅಗ್ನಿ ಅವಘಡ ಉಂಟಾಗಿದ್ದು ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ.

ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ 30 ಮಂದಿಯನ್ನು ರಕ್ಷಿಸಿದ್ದಾರೆ. ಹೊಟೇಲ್ ನ್ನು ಕೊರೊನಾ ರೋಗಿಗಳ ಚಿಕಿತ್ಸೆಗೆ ವಿಜಯವಾಡ ನಗರ ಪಾಲಿಕೆ ಪಡೆದುಕೊಂಡಿತ್ತು.

ಕಳೆದ  6ರಂದು ಅಹಮದಾಬಾದ್’ನ ನವರಂಗಪುರದಲ್ಲಿರುವ ಶ್ರೇಯ್ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ಮಂದಿ ರೋಗಿಗಳು ಸಜೀವ ದಹನವಾಗಿರುವ ಘಟನೆಯನ್ನು ಇಂದಿನ ದುರ್ಘಟನೆ ನೆನಪಿಸುತ್ತದೆ.

ಈ ದುರ್ಘಟನೆ ಇಂದು ನಸುಕಿನ ಜಾವ 5 ಗಂಟೆಗೆ ನಡೆದಿದೆ. ಹೊಟೇಲ್ ನಲ್ಲಿ ಸುಮಾರು 22 ಕೊರೊನಾ ಸೋಂಕಿತರಿಗೆ  ಚಿಕಿತ್ಸೆ ನೀಡಲಾಗುತ್ತಿತ್ತು. ಬೆಂಕಿ ದುರಂತ ನಂತರ ಎಲ್ಲರನ್ನೂ ಸ್ಥಳಾಂತರಿಸುತ್ತಿದ್ದೇವೆ. ಪ್ರಾಥಮಿಕ ವರದಿಯಿಂದ ಬೆಂಕಿ ಹತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದುಬಂದಿದೆ. ಅದನ್ನು ಖಚಿತಪಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ಇಮ್ತಿಯಾಜ್ ತಿಳಿಸಿದ್ದಾರೆ.

ಆಂಧ್ರ ಸರಕಾರ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

ಪ್ರಧಾನಿ ಸಂತಾಪ:  ಪ್ರಧಾನಿ ಮೋದಿ, ಪ್ರಾಣ ಕಳೆದುಕೊಂಡ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.  ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದೇನೆ ಎಂದಿದ್ದಾರೆ.

 error: Content is protected !!
Scroll to Top