ಕರೋನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂಬ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೆಲವು ಷರತ್ತುಗಳೊಂದಿಗೆ ಒಪ್ಪಿಕೊಂಡಿದೆ.
ದಿಲ್ಲಿ: ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂಬ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೆಲವು ಷರತ್ತುಗಳೊಂದಿಗೆ ಒಪ್ಪಿಕೊಂಡಿದೆ. ಡಬ್ಲ್ಯುಎಚ್‌ಒ ಗುರುವಾರ ಈ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಈ ಗೈಡ್ ಲೈನ್ಸ್ ನಲ್ಲಿ ಗಾಳಿಯಲ್ಲಿ ವೈರಸ್ ಹರಡುವಿಕೆಗೆ ಸಂಬಂಧಿಸಿದ ವಾದಗಳನ್ನು ಸ್ವೀಕರಿಸಲಾಗಿದೆ. ಆದರೂ ಕೊಡ ಈ ನಿಟ್ಟಿನಲ್ಲಿ ವ್ಯಾಪಕ ಅಧ್ಯಯನ ನಡೆಸುವುದು ಅಗತ್ಯವಿದೆ ಎಂದು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ.
ಇತ್ತೀಚೆಗಷ್ಟೇ ಹಲವು ದೇಶಗಳ ಸುಮಾರು 200 ವಿಜ್ಞಾನಿಗಳು ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂಬ ವಾದ ಮಂಡಿಸಿ . ಡಬ್ಲ್ಯುಎಚ್‌ಒ ಗೆ ವರದಿ ಸಲ್ಲಿಸಿದ್ದರು. ವಿಶೇಷವಾಗಿ ಸೋಂಕಿತ ವ್ಯಕ್ತಿಯು ಉಸಿರಾಡುವಾಗ, ಮಾತನಾಡುವಾಗ ಅಥವಾ ಕೆಮ್ಮಿದಾಗ, ವೈರಸ್ ಗಾಳಿಯಲ್ಲಿ ಹರಡುತ್ತದೆ. ಕೆಲವು ವೈದ್ಯಕೀಯ ವಿಧಾನಗಳನ್ನು ಹೊರತುಪಡಿಸಿ, ಕೊರೊನಾ ವೈರಸ್ ಗಾಳಿಯಲ್ಲಿ ಹರಡುವ ಸಾಧ್ಯತೆಯನ್ನು ಬಹಳ ಹಿಂದೆಯೇ ತಳ್ಳಿಹಾಕಿದ್ದ . ಡಬ್ಲ್ಯುಎಚ್‌ಒ ಇದೀಗ ವಿಜ್ಞಾನಿಗಳ ವಾದವನ್ನು ಕೆಲ ಷರತ್ತುಗಳ ಮೇಲೆ ಸ್ವೀಕರಿಸಿದೆ.
ರೆಸ್ಟೋರೆಂಟ್, ಫಿಟ್ನೆಸ್ ಸೆಂಟರ್ ಇತ್ಯಾದಿ ಒಳಾಂಗಣ ಪ್ರದೇಶಗಳಲ್ಲಿ ಸೋಂಕು ಹರಡಿದೆ ಎಂಬುದರ ಆಧಾರದ ಮೇಲೆ ಡಬ್ಲ್ಯುಎಚ್‌ಒ ಇದನ್ನು ಒಪ್ಪಿಕೊಂಡಿದೆ. ಸೋಂಕಿತ ವ್ಯಕ್ತಿಯೊಂದಿಗೆ ಅದರಲ್ಲೂ ವಿಶೇಷವಾಗಿ ಒಳಾಂಗಣ ಸ್ಥಳಗಳಲ್ಲಿ ದೀರ್ಘಕಾಲ ಉಳಿಯುವುದರಿಂದ ಸೋಂಕು ಪಸರಿಸಬಹುದು. ಆದರೆ ಈ ವಿಷಯದಲ್ಲಿ ತಕ್ಷಣ ಸುದೀರ್ಘ ಅಧ್ಯಯನ ನಡೆಸುವ ಅವಶ್ಯಕತೆ ಇದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸದ್ಯ ಅಸ್ತಿತ್ವದಲ್ಲಿರುವ ಪುರಾವೆಗಳ ಪರಿಶೀಲನೆಯ ಆಧಾರದ ಮೇಲೆ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನುವಾಗ, ಉಸಿರಾಡುವಾಗ, ಮಾತನಾಡುವಾಗ ಅಥವಾ ಹಾಡುವಾಗ ಈ ವೈರಸ್ ಕಲುಷಿತ ಮೇಲ್ಮೈಗಳಿಗೆ ನೇರ ಅಥವಾ ಪರೋಕ್ಷವಾಗಿ ಒಡ್ಡಿಕೊಳ್ಳುತ್ತದೆ ಮತ್ತು ಗಾಳಿಯಲ್ಲಿ ಪಸರಿಸುವ ಮೂಲಕ ಇತರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಕಳೆದ ವಾರ 32 ದೇಶಗಳ ಸುಮಾರು 239 ವಿಜ್ಞಾನಿಗಳು ಡಬ್ಲ್ಯುಎಚ್‌ಒಗೆ ಬರೆದ ಬಹಿರಂಗ ಪತ್ರದಲ್ಲಿ ಗಾಳಿಯಲ್ಲಿರುವ ವೈರಸ್ ನ ಸೂಕ್ಸ್ಮ ಕಣಗಳು ಇತರೆ ಜನರನ್ನು ಸೋಂಕಿತರನ್ನಾಗಿಸುವ ಸಾಧ್ಯತೆ ಇದೆ ಎಂದು ವಾದ ಮಂಡಿಸಿದ್ದರು. ಇದಕ್ಕೂ ಮೊದಲು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷನರಿ ಡಿಸೀಸ್ ಸಂಸ್ಥೆಯ ನಿರ್ದೇಶಕ ಡಾ. ಆಂಥೋನಿ ಫೌಸಿ, COVID-19 ಗಾಳಿಯಲ್ಲಿ ಹರಡುತ್ತದೆ ಎನ್ನುವುದಕ್ಕೆ ಇನ್ನೂ ಹೆಚ್ಚಿನ ಪುರಾವೆಗಳು ಸಿಕ್ಕಿಲ್ಲ, ಆದರೆ ಅದು ಸಂಭವಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದರು.