Home Blog

ಮತ್ಸ್ಯಗಂಧ ರೈಲಿನಲ್ಲಿ ಬಂದ ಮಹಿಳೆಯ 40 ಲ.ರೂ. ಆಭರಣ ಕಳವು

ಬ್ಯಾಗಿನಲ್ಲಿಟ್ಟಿದ್ದ ಚಿನ್ನ, ವಜ್ರದ ಒಡವೆಗಳು ಚೋರಿ

ಉಡುಪಿ : ಮುಂಬಯಿಯಿಂದ ಮತ್ಸ್ಯಗಂಧ ರೈಲಿನಲ್ಲಿ ಊರಿಗೆ ಬರುತ್ತಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ 40 ಲ.ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿದೆ.
ಮುಂಬಯಿಯ ಉಪನಗರ ಮುಲುಂಡ್‌ ನಿವಾಸಿ ದೀಪಾ ರೈ (44)) ಎಂಬವರು ಡಿ.5ರಂದು ಮದುವೆ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಕಟಪಾಡಿಯಲ್ಲಿರುವ ಮನೆಗೆ ಮತ್ಸ್ಯಗಂಧ ರೈಲಿನಲ್ಲಿ ಬರುತ್ತಿರುವಾಗ ಕಳ್ಳತನ ನಡೆದಿದೆ. ಅಕ್ಕ, ಭಾವ, ಅಮ್ಮ ಹಾಗೂ ತಂದೆ ಜತೆಗೆ ಅವರು ಪ್ರಯಾಣಿಸುತ್ತಿದ್ದರು. ಮೂರು ಬ್ಯಾಗುಗಳಲ್ಲಿ ಚಿನ್ನ ಮತ್ತು ವಜ್ರದ ಅಭರಣಗಳನ್ನು ಹಂಚಿ ಸೀರೆಗಳ ಒಳಗೆ ಇಟ್ಟಿದ್ದರು. ಡಿ.6ರಂದು ಮುಂಜಾನೆ ರೈಲು ಕುಂದಾಪುರಕ್ಕೆ ತಲುಪಿದಾಗ ಉಡುಪಿಯಲ್ಲಿ ಇಳಿಯುವ ಸಲುವಾಗಿ ಬ್ಯಾಗುಗಳನ್ನು ರೈಲಿನ ಬಾಗಿಲಿನ ಸಮೀಪ ಒಯ್ದು ಇರಿಸಿದ್ದರು. ರೈಲು ಉಡುಪಿಲ್ಲಿ ಮುಂಜಾನೆ 5.40ಕ್ಕೆ ಇಳಿದು ಕಟಪಾಡಿಯ ಮನೆಗೆ ತಲುಪಿ ಬ್ಯಾಗುಗಳನ್ನು ತೆರೆದು ನೋಡಿದಾಗ ಆಭರಣಗಳು ಇರಲಿಲ್ಲ. 34 ಲ.ರೂ. ಮೌಲ್ಯದ ಚಿನ್ನದ ಆಭರಣಗಳು ಮತ್ತು 6 ಲ.ರೂ. ಮೌಕಲ್ಯದ ವಜ್ರದ ನೆಕ್ಲೆಸ್‌ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುದ್ರಾಡಿ ಮಂಜುನಾಥ ಪೂಜಾರಿ ಅವರಿಗೆ ಪಿತೃವಿಯೋಗ

ಹೆಬ್ರಿ : ಹೆಬ್ರಿ : ಹೆಬ್ರಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ‌ ಅವರ ತಂದೆ, ಮಂಡಲ ಪಂಚಾಯತ್‌ನ ಮಾಜಿ ಸದಸ್ಯ ಚಂದು ಪೂಜಾರಿ ಬಾಚುಮಜಲ್ (95) ಡಿ. 7ರಂದು ನಿಧನ ಹೊಂದಿದರು. ಮೃತರು ಪತ್ನಿ ಕಮಲ ಪೂಜಾರ್ತಿ, ಪುತ್ರರಾದ ಸುಕುಮಾರ್‌ ಪೂಜಾರಿ, ಮನೋಜ್‌ ಸಿ. ಪೂಜಾರಿ, ಗಣೇಶ್‌ ಸಿ. ಪೂಜಾರಿ ಹಾಗೂ ಪುತ್ರಿಯರಾದ ರತ್ನ, ಮಾಲತಿ, ರೇವತಿ ಮತ್ತು ಪದ್ಮಾವತಿಯವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ನಾಳೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ವಕೀಲ ಕುಲದೀಪ್‌ ಮೇಲೆ ಪೊಲೀಸರಿಂದ ಹಲ್ಲೆ : ಅಮಾನತಿಗೆ ಆಗ್ರಹಿಸಿ ಕಾರ್ಕಳ ವಕೀಲರಿಂದ ಪ್ರತಿಭಟನೆ

ಕಾರ್ಕಳ : ಬೆಳ್ತಂಗಡಿ ತಾಲೂಕು ಪುಟ್ಟಿಲಾ ಗ್ರಾಮದ ವಕೀಲ ಕುಲದೀಪ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ಅಮಾನತಿಗೆ ಆಗ್ರಹಿಸಿ ಬುಧವಾರ ಕಾರ್ಕಳ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಕಾರ್ಕಳ ಬಾರ್‌ ಅಸೋಸಿಯೇಶನ್‌ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಸುನೀಲ್‌ ಕುಮಾರ್ ಶೆಟ್ಟಿ‌, ಕುಲದೀಪ್ ಶೆಟ್ಟಿ ಅವರನ್ನು ರಾತ್ರೋರಾತ್ರಿ ಪೊಲೀಸರು ಮನೆಯಿಂದ ಎಳೆದುಕೊಂಡು ಹೋಗಿ ಸುಳ್ಳು ಮೊಕದ್ದಮೆ ದಾಖಲಿಸಿರುತ್ತಾರೆ. ಅವರ ಮೇಲೆ ಹಲ್ಲೆ ನಡೆಸಿರುತ್ತಾರೆ. ಇದು ಖಂಡನೀಯ. ಸುಪ್ರೀಂ ಕೋರ್ಟ್ ಅರ್ನಿಶ್ ಕುಮಾರ್ ಪ್ರಕರಣದಲ್ಲಿ ಕೊಟ್ಟ ಮಾರ್ಗದರ್ಶನವನ್ನು ಪಾಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ. ಕುಲದೀಪ್‌ ಅವರಿಗಾದ ಅನ್ಯಾಯದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದೇವೆ. ಸಂಬಂಧಪಟ್ಟ ಪೊಲೀಸರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಬಾರ್‌ ಅಸೋಸಿಯೇಶನ್‌ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರಕರಣದ ಹಿನ್ನೆಲೆ
2022ರ ನವೆಂಬರ್‌ನಿಂದ ಕುಲದೀಪ್‌ ಅವರು ಮಂಗಳೂರಿನಲ್ಲಿ ವಕೀಲರಾಗಿ ಪ್ರಾಕ್ಟೀಸ್‌ ಮಾಡುತ್ತಿದ್ದು, ಬಂಟ್ವಾಳ ತಾಲೂಕಿನ ದೇವಸ್ಯ ಮೂದೂರು ಗ್ರಾಮದಲ್ಲಿ ನೆರೆಯ ಕೆ. ವಸಂತಗೌಡ ಅವರೊಂದಿಗೆ ಆಸ್ತಿ ವಿವಾದ ಹೊಂದಿದ್ದರು. ಈ ಪ್ರಕರಣವು ಬಂಟ್ವಾಳದ ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್‌ ನ್ಯಾಯಾಧೀಶರ ಮುಂದೆ ಇತ್ತು. 2022ರ ಡಿ. 2ರಂದು ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ಸುತೇಶ್‌ ಅವರ ನೇತೃತ್ವದಲ್ಲಿ ನಾಲ್ವರು ಪೊಲೀಸರು ಕುಲದೀಪ್‌ ಮನೆಗೆ ನುಗ್ಗಿ, ಅವರನ್ನು ಹೊರಗೆ ಎಳೆದು ತಂದಿದ್ದಲ್ಲದೇ ಪುಂಜಾಲಕಟ್ಟೆ ಠಾಣೆಗೆ ಕರೆದೊಯ್ದಿದ್ದರು. ಸಂಜೆ 4 ಗಂಟೆವರೆಗೆ ಅವರನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು. ಈ ಸಂದರ್ಭ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಡಿ. 3ರಂದು ಬಂಟ್ವಾಳದ ಮ್ಯಾಜಿಸ್ಟ್ರೇಟ್‌ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು.

ರೆಪೊ ದರ ಹೆಚ್ಚಳ : ಏರಲಿದೆ ಸಾಲದ ಕಂತು


ಮುಂಬಯಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸಿದೆ. ಪರಿಷ್ಕೃತ ರೆಪೊ ದರ ಶೇ. 6.25 ಆಗಿದೆ. ಈ ವರೆಗೆ ರೆಪೊ ದರ ಶೇಕಡಾ 5.90ರಷ್ಟು ಇತ್ತು. ಪರಿಷ್ಕೃತ ರೆಪೊ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆರ್‌​ಬಿಐ ಘೋಷಿಸಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು. ರೆಪೊ ದರ ಹೆಚ್ಚಳದ ಪರಿಣಾಮವಾಗಿ ವಾಹನ, ಗೃಹ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರ, ಇಎಂಐ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.ಜಾಗತಿಕ ಆರ್ಥಿಕತೆಯು ಅನಿಶ್ಚಿತತೆ ಎದುರಿಸುತ್ತಿದೆ. ಆಹಾರ ಕೊರತೆ ಮತ್ತು ಅತಿಯಾದ ಇಂಧನ ದರ ಬಡವರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ರಷ್ಯಾ – ಉಕ್ರೇನ್ ಯುದ್ಧದ ಬಳಿಕ ಜಾಗತಿಕ ಹಣದುಬ್ಬರ ಪ್ರಮಾಣ ಅತಿಯಾಗಿ ಏರಿಕೆ ಕಂಡಿದೆ. ಆದರೆ, ಭಾರತದ ಆರ್ಥಿಕತೆ ಸ್ಥಿರವಾಗಿದೆ. ಭಾರತವು ಜಾಗತಿಕ ಮಟ್ಟದಲ್ಲೇ ಹೆಚ್ಚು ಬೆಳವಣಿಗೆ ದಾಖಲಿಸುತ್ತಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರ್​ಬಿಐ ಸತತ ಐದನೇ ಬಾರಿ ರೆಪೊ ದರ ಹೆಚ್ಚಳ ಮಾಡಿದೆ. ಕಳೆದ ಬಾರಿಯ ಹಣಕಾಸು ನೀತಿಯಲ್ಲಿ ಆರ್​ಬಿಐ ರೆಪೊ ದರವನ್ನು 50 ಮೂಲಾಂಶದಷ್ಟು ಹೆಚ್ಚಳ ಮಾಡಿತ್ತು. ಒಟ್ಟಾರೆಯಾಗಿ ಮೇ ತಿಂಗಳ ಬಳಿಕ ಆರ್​ಬಿಐ ರೆಪೊ ದರದಲ್ಲಿ 190 ಮೂಲಾಂಶದಷ್ಟು ಹೆಚ್ಚಳ ಮಾಡಿದೆ.

ದಿಲ್ಲಿ : ಬಿಜೆಪಿ- ಆಪ್‌ ಸಮಬಲದ ಹೋರಾಟ

ಆಟಕ್ಕೂ ಲೆಕ್ಕಕ್ಕೂ ಇಲ್ಲದ ಕಾಂಗ್ರೆಸ್‌

ಹೊಸದಿಲ್ಲಿ : ವಿಧಾನಸಭೆ ಚುನಾವಣೆಯಷ್ಟೇ ಕುತೂಹಲ ಕೆರಲಿಸಿರುವ ದಿಲ್ಲಿಯ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ
ಇಂದು ನಡೆಯುತ್ತಿದ್ದು, ಆರಂಭಿಕ ಸುತ್ತುಗಳಲ್ಲಿ ಬಿಜೆಪಿ ಮತ್ತು ಆಮ್‌ ಆದ್ಮಿ ಪಾರ್ಟಿ ನಡುವೆ ಸಮಬಲದ ಹೋರಾಟ ಕಂಡುಬರುತ್ತಿದೆ.
15 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿಯನ್ನು ಈ ಸಲ ಆಪ್‌ ಕೆಳಗಿಳಿಸಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆರಂಭಿಕ ಹಂತದ ಮತ ಎಣಿಕೆ ಮುಗಿದಾಗ ಇದು ಸತ್ಯವಾಗುವ ಲಕ್ಷಣಗಳು ಕಾಣಿಸುತ್ತಿದೆ. ಆಪ್‌ 115 ಮತ್ತು ಬಿಜೆಪಿ 115 ವಾರ್ಡ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಕಾಂಗ್ರೆಸ್‌ ಬರೀ 9 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. 250 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಬಹುಮತಕ್ಕೆ 126 ಸ್ಥಾನಗಳನ್ನು ಅಗತ್ಯವಿದೆ.

ಕರ್ನಾಟಕ ಸೇರ ಬಯಸಿದ ಸೊಲ್ಲಾಪುರದ 11 ಗ್ರಾಮ

ಪಂಚಾಯತ್‌ಗಳಲ್ಲಿ ನಿರ್ಣಯ ಅಂಗೀಕಾರ ; ಮಹಾರಾಷ್ಟ್ರಕ್ಕೆ ಮುಖಭಂಗ

ಸೊಲ್ಲಾಪುರ: ಅತ್ತ ಮಹಾರಾಷ್ಟ್ರ ಗಡಿ ವಿವಾದವನ್ನು ಕೆದಕಿ ತಕರಾರು ಎಬ್ಬಿಸುತ್ತಿರುವಾಗಲೇ ಮಹಾರಾಷ್ಟ್ರದಲ್ಲಿರುವ ಗಡಿ ಜಿಲ್ಲೆ ಸೊಲ್ಲಾಪುರದ 11 ಗ್ರಾಮಗಳು ಕರ್ನಾಟಕದ ಜತೆ ಸೇರಲು ನಿರ್ಣಯ ಅಂಗೀಕರಿಸಿವೆ. ಈ ಬೆಳವಣಿಗೆ ಗಡಿ ತಂಟೆ ಎಬ್ಬಿಸಿರುವ ಮಹಾರಾಷ್ಟ್ರ ಸರಕಾರಕ್ಕೆ ತೀವ್ರ ಮುಖಭಂಗವುಂಟುಮಾಡಿದೆ.
ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿ ಮೂಲಕ ಈ ಪಂಚಾಯತ್‌ಗಳು ಸರಕಾರಕ್ಕೆ ಮನವಿ ಸಲ್ಲಿಸಿ, ಕರ್ನಾಟಕ ಸೇರಲು ನಿರಾಕ್ಷೇಪಣ ಪತ್ರ ನೀಡುವಂತೆ ಕೋರಿವೆ. ಪಂಚಾಯತ್‌ಗಳ ನಿರ್ಣಯದ ಪ್ರತಿ ಹಾಗೂ ಅರ್ಜಿ ತಮ್ಮ ಕಚೇರಿಗೆ ತಲುಪಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಕ್ಕಲಕೋಟೆ ತಾಲೂಕಿನ ಅಳ್ಗೆ ಹಾಗೂ ಇನ್ನೂ 10 ಗ್ರಾಮಗಳ ನಿವಾಸಿಗಳು ಇತ್ತೀಚೆಗೆ ಸೊಲ್ಲಾಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮೂಲಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ಇತರ ಸೌಲಭ್ಯಗಳ ನೀಡುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ. ನಮ್ಮ ಗ್ರಾಮಗಳು ಯಾವುದೇ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಗಡಿಯಾಚೆಗಿನ ಗ್ರಾಮಗಳನ್ನು ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿದೆ ಎಂದು ಈ ಗ್ರಾಮಗಳ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಆ ಗ್ರಾಮಗಳಲ್ಲಿ ನೆಲೆಸಿರುವ ಕೆಲವು ಕನ್ನಡಿಗರಿಗೆ ಮಹಾರಾಷ್ಟ್ರ ಪೊಲೀಸರು ನೋಟಿಸ್‌ ಜಾರಿ ಮಾಡಿ ಪೂರ್ವಾನುಮತಿ ಪಡೆಯದೆ ಕರ್ನಾಟಕದೊಂದಿಗೆ ವಿಲೀನಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಅಥವಾ ಘೋಷಣೆಗಳನ್ನು ಕೂಗಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಗಡಿಯಲ್ಲಿ ಸುಮಾರು 60 ಹಳ್ಳಿಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸುತ್ತಿವೆ. ಮುಖ್ಯಮಂತ್ರಿಗಳ ಭೇಟಿಗೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಶೀಘ್ರವೇ ಬೆಳಗಾವಿ ಡಿಸಿ, ಎಸ್ಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ಇಲ್ಲಿ ಕನ್ನಡ ಮುಖಂಡರು ಹೇಳಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ ಜತ್ತದ 42 ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸಿದ್ದವು. ಗಡಿ ಭಾಗದಲ್ಲಿರುವ ತನ್ನ ಗ್ರಾಮಗಳನ್ನು ಕರ್ನಾಟಕ ಸರಕಾರ ಬಹಳಷ್ಟು ಅಭಿವೃದ್ಧಿಪಡಿಸಿದೆ. ಮುಖ್ಯವಾಗಿ ನೀರಾವರಿ, ಶಾಲೆ, ರಸ್ತೆಗಳು ಅಭಿವೃದ್ಧಿಗೊಂಡಿವೆ. ಆದರೆ ಮಹಾರಾಷ್ಟ್ರದ ಭಾಗದಲ್ಲಿ ಇನ್ನೂ ಮೂಲಸೌಲಭ್ಯಗಳ ಕೊರತೆಯಿದೆ. ಹೀಗಾಗಿ ಗಡಿ ಭಾಗದ ಜನರು ಕರ್ನಾಟಕ ಸೇರುವ ಒಲವು ಹೊಂದಿದ್ದಾರೆ.

ನಾಳೆಯಿಂದ ಆಯುಷ್ಮಾನ್‌ ಭಾರತ್‌ ಕಾರ್ಡ್‌ ವಿತರಣೆ

ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಆಯುಷ್ಮಾನ್ ಭಾರತ್–ಪ್ರಧಾನಮಂತ್ರಿ ಜನಾರೋಗ್ಯ-ಆರೋಗ್ಯ ಕರ್ನಾಟಕ ಯೋಜನೆಯ ಗುರುತಿನ ಚೀಟಿಗಳ ವಿತರಣೆ ಡಿ. 8 ರಿಂದ ಪ್ರಾರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿ.8 ರಂದು ಕಾರ್ಡ್‌ ವಿತರಣೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯದ 5.09 ಕೋಟಿ ಜನರಿಗೆ ಕಾರ್ಡ್‌ ವಿತರಣೆಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.
ಎಲ್ಲ ಜಿಲ್ಲೆಗಳಲ್ಲಿ ಎಬಿ-ಪಿಎಂಜೆಎವೈ-ಎಆರ್‌ಕೆ ಗುರುತಿನ ಚೀಟಿ ವಿತರಿಸಲು ಆರೋಗ್ಯ ಇಲಾಖೆಯಿಂದ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಪಿಎಲ್ ಕುಟುಂಬಗಳು ಒಳಗೊಂಡಂತೆ ಎಲ್ಲಾ ಅರ್ಹ 5.09 ಕೋಟಿ ಫಲಾನುಭವಿಗಳಿಗೆ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿ ಮುದ್ರಿಸಿ ವಿತರಿಸುವ ಗುರಿ ಹೊಂದಲಾಗಿದೆ.
ಕಾರ್ಡಿನಲ್ಲಿ ಎಬಿಎಚ್ಎ (Ayushman Bharath Health Account) ಗುರುತಿನ ಸಂಖ್ಯೆಯನ್ನು ಸಹ ನಮೂದು ಮಾಡಿದ್ದು, ರೋಗಿಯ ಆರೋಗ್ಯ ದಾಖಲೆಗಳನ್ನು ಈ ಗುರುತಿನ ಚೀಟಿ ಒಳಗೊಂಡಿದೆ. ಆದ್ದರಿಂದ ಚಿಕಿತ್ಸೆಗಾಗಿ ಹೆಚ್ಚಿನ ದಾಖಲೆಗಳನ್ನು ರೋಗಿಗಳು ಕೊಂಡೊಯ್ಯುವ ಅಗತ್ಯವಿಲ್ಲ. ಗ್ರಾಮ ಒನ್‌, ಕರ್ನಾಟಕ ಒನ್ ಹಾಗೂ ಜನ ಸೇವಕ ಕೇಂದ್ರಗಳಿಂದ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದ್ದು, 1.20 ಕೋಟಿ ಗುರುತಿನ ಚೀಟಿ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ 3 ತಿಂಗಳ ಒಳಗಾಗಿ ಉಳಿದ 4 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಎಬಿ-ಪಿಎಂಜೆಎವೈ-ಎಆರ್.ಕೆ ಗುರುತಿನ ಚೀಟಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

33 ವಾರದ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ

ದಿಲ್ಲಿ ಹೈಕೋರ್ಟ್‌ ಅಪರೂಪದ ತೀರ್ಪು

ಹೊಸದಿಲ್ಲಿ : ಅಪರೂಪದ ಪ್ರಕರಣವೊಂದರಲ್ಲಿ ದಿಲ್ಲಿ ಹೈಕೋರ್ಟ್‌ 33 ವಾರದ ಗರ್ಭಿಣಿಐೊಬ್ಬರಿಗೆ ಗರ್ಭಪಾತಕ್ಕೆ ಅನುಮತಿ ನೀಡಿದೆ. ಗರ್ಭಪಾತದ ವಿಷಯದಲ್ಲಿ ತಾಯಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಹಾಗೂ ಹುಟ್ಟಲಿರುವ ಮಗುವಿಗೆ ಗೌರವಯುತ ಜೀವನ ಒದಗಿಸುವ ದೃಷ್ಟಿಯಿಂದ ತಾಯಿಯ ಗರ್ಭಪಾತ ನಿರ್ಧಾರವನ್ನು ಕೋರ್ಟ್‌ ಮಾನ್ಯ ಮಾಡುತ್ತದೆ ಎಂದು ಹೇಳಿದೆ. ಪ್ರಸ್ತುತ 24 ವಾರದವರೆಗಿನ ಗರ್ಭಿಣಿಯ ಗರ್ಭಪಾತಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದರೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೋರ್ಟ್‌ ಈ ಅನುಮತಿ ನೀಡಿದೆ.
ಗರ್ಭದಲ್ಲಿರುವ ಮಗುವಿಗೆ ಮಿದುಳಿನ ಸಮಸ್ಯೆ ಇದೆ. ಅಂಗವಿಕಲ ಆಗುವ ಭೀತಿ ಇದೆ. ಹೀಗಾಗಿ 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ.ಸಿಂಗ್‌, ಮಹಿಳೆ ತನ್ನ ಗರ್ಭವನ್ನು ಅಂತ್ಯಗೊಳಿಸುವ ವಿಷಯ ಪ್ರಪಂಚಾದ್ಯಂತ ಚರ್ಚೆಯ ವಿಷಯವಾಗಿದ್ದರೂ ಭಾರತ ತನ್ನ ಕಾನೂನಿನಲ್ಲಿ ಮಹಿಳೆಯ ಆಯ್ಕೆಯನ್ನು ಗುರುತಿಸುತ್ತದೆ. ಅಲ್ಲದೇ ಹುಟ್ಟಲಿರುವ ಮಗುವಿಗೆ ಸಮಾಜದಲ್ಲಿ ಗೌರವಯುತ ಬದುಕನ್ನು ದೊರಕಿಸಿಕೊಡುವುದು ಸಹ ಅವಶ್ಯವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಕಾನೂನಿನ ಪ್ರಕಾರ 24 ವಾರಗಳ ಗರ್ಭಿಣಿಗೆ ಮಾತ್ರ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ ಎಂಬ ಕಾರಣ ನೀಡಿ ಅವಧಿ ಮೀರಿರುವುದರಿಂದ ಆಸ್ಪತ್ರೆಯು ಗರ್ಭಪಾತಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಮಹಿಳೆ, ‘ಗರ್ಭದಲ್ಲಿರುವ ಮಗು ಕೆಲವು ಅಂಗವಿಕಲತೆಯಿಂದ ಬಳಲುತ್ತಿದೆ. ಹೀಗಾಗಿ 24 ವಾರ ಮೀರಿದ್ದರೂ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದರು.

ಗ್ರಾಮ ಲೆಕ್ಕಿಗರು ಇನ್ನು ಗ್ರಾಮ ಆಡಳಿತ ಅಧಿಕಾರಿ

ಪದನಾಮ ಬದಲಾಯಿಸಿ ಸರಕಾರ ಆದೇಶ

ಬೆಂಗಳೂರು : ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಇನ್ನು ‘ಗ್ರಾಮ ಆಡಳಿತ ಅಧಿಕಾರಿ’ ಎಂದು ಅರಿಯಲ್ಪಡುತ್ತಾರೆ. ಗ್ರಾಮ ಲೆಕ್ಕಿಗರ ಪದನಾಮವನ್ನು ಬದಲಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಗ್ರಾಮ ಲೆಕ್ಕಿಗ ಹುದ್ದೆಯ ಪದನಾಮವನ್ನು ‘ಗ್ರಾಮ ಆಡಳಿತ ಅಧಿಕಾರಿ’ (Village Administrative Officer) ಎಂದು ಬದಲಾವಣೆ ಮಾಡಲಾಗಿದೆ. ಎಲ್ಲಾ ಪ್ರಾದೇಶಿಕ ಆಯುಕ್ತರು ಪದನಾಮವನ್ನು ಬದಲಾವಣೆ ಮಾಡುವ ಸಂಬಂಧ ವರದಿ ಸಲ್ಲಿಕೆ ಮಾಡಿದ್ದರು.
ಗ್ರಾಮ ಲೆಕ್ಕಿಗರ ಹುದ್ದೆ ಹೆಸರು ಮಾತ್ರ ಬದಲಾಗಿದೆಯೇ ಹೊರತು ವೇತನ ಶ್ರೇಣಿ, ನೇಮಕಾತಿ ವಿಧಾನ ಅಥವಾ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಮಂಗಳೂರಿನಲ್ಲಿ ಮತ್ತೆ ಲವ್‌ ಜಿಹಾದ್‌ : ಯುವಕ-ಯುವತಿ ಮೇಲೆ ಹಲ್ಲೆ

ಒಂದೇ ಪ್ರಕರಣಕ್ಕೆ ಸಂಬಂಧಿಸಿ ಮೂರು ಕೇಸು ದಾಖಲು

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ಲವ್ ಜಿಹಾದ್ ಪ್ರಕರಣ ಸಂಭವಿಸಿದೆ. ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಯುವಕ ಮತ್ತು ಆತನ ಸಹೋದ್ಯೋಗಿ ಹಿಂದೂ ಮಹಿಳೆಯ ಮೇಲೆ ಹಿಂದುತ್ವವಾದಿ ಕಾರ್ಯಕರ್ತರು ಮಹಿಳೆಯ ಪೋಷಕರ ಸಮ್ಮುಖದಲ್ಲಿ ಹಲ್ಲೆ ನಡೆಸಿದ್ದಾರೆ.ಉಳ್ಳಾಲದ ಲುಕ್ಮಾನ್ ಎಂಬ ಯುವಕನ ಜತೆ ಶೃಂಗೇರಿ ಸಮೀಪದ ಕೊಪ್ಪ ನಿವಾಸಿ ಯುವತಿ ಸುತ್ತಾಡುತ್ತಿದ್ದು ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿತ್ತು.
ಮಂಗಳವಾರ ಸಂಜೆ 10ಕ್ಕೂ ಹೆಚ್ಚು ಹಿಂದುತ್ವ ಕಾರ್ಯಕರ್ತರು ಚಿನ್ನಾಭರಣ ಅಂಗಡಿಗೆ ನುಗ್ಗಿ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿಯ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 3 ಪ್ರಕರಣಗಳು ದಾಖಲಾಗಿದೆ ಎಂದು ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಯುವಕ ಹಲ್ಲೆ ಮತ್ತು ಯುವತಿ ಗಲಭೆಯ ಬಗ್ಗೆ ದೂರು ನೀಡಿದ್ದು, ಹಿಂದುತ್ವ ಕಾರ್ಯಕರ್ತರು ಮತ್ತು ಯುವತಿಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಮಧ್ಯೆ ಮುಸ್ಲಿಂ ಯುವಕ ತನ್ನನ್ನು ನಿಂದಿಸಿ ಗಂಭೀರ ಪರಿಣಾಮ ಬೀರುವ ಬೆದರಿಕೆ ಹಾಕಿದ್ದಾನೆ ಎಂದು ಯುವತಿಯ ತಾಯಿ ದೂರಿದ್ದಾರೆ. ಆಭರಣ ಅಂಗಡಿಯವರು ಅತಿಕ್ರಮಿಸಿ ಗಲಾಟೆ ಮಾಡಿದ್ದಾರೆ ಎಂದು ದೂರಿದ್ದಾರೆ.

error: Content is protected !!