ಕಾರ್ಕಳ : ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಭವಿಷ್ಯದ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಕಳ ವಲಯದ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನ. 20 ರಂದು ಸರಕಾರಿ ಪದವಿ ಪೂರ್ವ (ಬೋರ್ಡ್ ಹೈಸ್ಕೂಲ್) ಕಾಲೇಜಿನಲ್ಲಿ ತಾಲೂಕು ಮಟ್ಟದ ಭಿತ್ತಿ ಪತ್ರ ರಚನೆ, ಪ್ರಬಂಧ ರಚನೆ ಮತ್ತು ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್.ಟಿ ಮಾತನಾಡಿ, ದೇಶವನ್ನು ಸಮರ್ಪಕವಾಗಿ ಸಮರ್ಥ ರೀತಿಯಲ್ಲಿ ಆಳುವ ಜನಪ್ರತಿನಿಧಿಗಳ ಆಯ್ಕೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಮತದಾನದ ಹಕ್ಕನ್ನು ಯಾರದೋ ಒತ್ತಡಕ್ಕೆ, ಆಮಿಷಕ್ಕೆ ಬಲಿಕೊಡದೆ ತಮ್ಮ ವಿವೇಚನೆಗೆ ಅನುಗುಣವಾಗಿ ಚಲಾಯಿಸಿ ಎಂದ ಅವರು ಮತದಾನದ ಮಹತ್ವ, ಯುವ ಜನತೆಯ ಹಕ್ಕು ಮತ್ತು ಕರ್ತವ್ಯದ ಬಗ್ಗೆ ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ಕಾಲೇಜಿನ ಹಿರಿಯ ಸಹ ಶಿಕ್ಷಕ ನಾಗರಾಜ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉಮೇಶ್ ಕೆ. ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ತೀರ್ಪುಗಾರರಾಗಿ ಶಿಕ್ಷಕರಾದ ಮಾದಪ್ಪ, ಸುನಿಲ್ ಮತ್ತು ಪ್ರತಿಮಾ ಕರ್ತವ್ಯ ನಿರ್ವಹಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತಿ ಮತ್ತು ಪ್ರೇಮಾ ಕುಮಾರಿ ಸಹಕರಿಸಿದರು.
ಫಲಿತಾಂಶ – ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ
ವಲಯದ 15 ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಿತ್ತಿಪತ್ರ ರಚನೆಯಲ್ಲಿ ಶ್ರೇಯಸ್ ಎಸ್. ಪೂಜಾರಿ (ಸ. ಪ.ಪೂ.ಕಾಲೇಜು ಸಾಣೂರು), ಕನ್ನಡ ಪ್ರಬಂಧದಲ್ಲಿ ಮಿಥುನ್ (ಸ. ಪ್ರೌ. ಶಾಲೆ, ಕಲ್ಯಾ) ಇಂಗ್ಲಿಷ್ ಪ್ರಬಂಧದಲ್ಲಿ ಸ್ನೇಹಾ (ಸ. ಪ್ರೌ.ಶಾಲೆ, ರೆಂಜಾಳ) ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಮುಖ್ ಮತ್ತು ಸಾನ್ವಿತ್ (ಸ. ಪ. ಪೂ.ಕಾಲೇಜು, ಬೈಲೂರು) ಈ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.