ಕಗ್ಗದ ಸಂದೇಶ-ಮನಸ್ಸು ಮತ್ತು ಬುದ್ಧಿ ಪಕ್ವವಾದಾಗಲೇ ಬದುಕು ಸಾರ್ಥಕ…

ಪರಿಪರಿ ಪರೀಕ್ಷೆಗಳು, ಪರಿಭವದ ಶಿಕ್ಷೆಗಳು|
ಗರಡಿಯ ವ್ಯಾಯಾಮ ಮನಬುದ್ಧಿ ಗಳಿಗೆ||
ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ|
ಬಿರಿದ ನೆನೆ ಫಲಕೆ ಮನೆ–ಮಂಕುತಿಮ್ಮ||

ಬದುಕಿನಲ್ಲಿ ಎದುರಾಗುವ ವಿಧವಿಧವಾದ ಪರೀಕ್ಷೆಗಳು, ಸೋಲಿನ ಪಾಠಗಳು ಮನಸ್ಸು ಮತ್ತು ಬುದ್ಧಿಗೆ ಗರಡಿಯ ವ್ಯಾಯಾಮದ ಫಲವನ್ನು ನೀಡುತ್ತವೆ. ಷೌರುಷಕ್ಕೆ ಉಂಟಾಗುವ ಪೆಟ್ಟುಗಳಿಂದಾದ ಗಂಟುಗಳೇ ವಿಜಯದ ಸಂಕೇತ.
ಮೊಗ್ಗು ಅರಳಿದಾಗಲೇ ಫಲ ಕೊಡಲು ಸಾಧ್ಯವಾಗುವುದು. ಅಂತೆಯೇ ಮನಸ್ಸು ಮತ್ತು ಬುದ್ಧಿ ಪಕ್ವವಾದಾಗಲೇ ಬದುಕು ಸಾರ್ಥಕವಾಗುವುದು ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ಜೀವನವೆಂದರೆ ಹೂವಿನ ಹಾಸಿಗೆಯಲ್ಲ, ಕಲ್ಲು ಮುಳ್ಳುಗಳ ದಾರಿಯೂ ಹೌದು. ವಿಧವಿಧವಾದ ಸಮಸ್ಯೆಗಳು ಎದುರಾಗುತ್ತವೆ. ಸೋಲು ಸಂಕಟಗಳು ಸಾಮಾನ್ಯ. ಇವೆಲ್ಲವೂ ಬದುಕಿಗೆ ಅಗತ್ಯವಾದ ಅನುಭವವನ್ನು ನೀಡುತ್ತವೆ ಮತ್ತು ಮನಸ್ಸನ್ನು ಗಟ್ಟಿಗೊಳಿಸುತ್ತವೆ.

ಅತ್ತು ಗೋಳಾಡದಿರು ದುಃಖವಡರಿದಾಗ|
ಮತ್ತೆ ಕುಣಿದಾಡದಿರು ಸುಖವು ಲಭಿಸೆ||
ಸುತ್ತಲೇಬೇಕು ನೀಂ ಸುಖದುಃಖಗಳ ನಡುವೆ|
ಚಿತ್ತ ಪರಿಪಾಕಗೊಳೆ-ಬೋಳುಬಸವ||

ಎಂಬ ನಿಜಗುಣರ ನುಡಿಯಂತೆ ಸುಖ ಮತ್ತು ದುಃಖ ಎರಡನ್ನು ಅನುಭವಿಸಿದಾಗಲೇ ಮನಸ್ಸು ಪರಿಪಕ್ವವಾಗುವುದು. ಕಷ್ಟಗಳನ್ನು, ಸಮಸ್ಯೆಗಳನ್ನು ಸಕಾರಾತ್ಮಕ ಮನಸ್ಸಿನಿಂದ ಎದುರಿಸಬೇಕು. ಕಷ್ಟಗಳು ಬಂದಾಗ ಅಥವಾ ಸಂಕಟ ಬಂದಾಗ ಎದೆಗುಂದಬಾರದು ಹಾಗೂ ಆ ಕಾರಣಕ್ಕಾಗಿ ಯಾರನ್ನು ಹಳಿಯಬಾದು. ಇಂತಹ ಸಂದರ್ಭಗಳಲ್ಲಿ ಕೆಲವರು ಮನುಷ್ಯರನ್ನು ಮಾತ್ರವಲ್ಲ ದೇವರನ್ನು ಬೈಯುತ್ತಾರೆ.
ಬದುಕಿನಲ್ಲಿ ಕಟ್ಟಿಗೆಯಾಗದೆ ಇಟ್ಟಿಯಾಗಬೇಕು. ಕಟ್ಟಿಗೆ ಸುಟ್ಟರೆ ಬೂದಿಯಾಗುವುದು ಆದರೆ ಇಟ್ಟಿಗೆ ಸುಟ್ಟಾಗಲೇ ಇನ್ನಷ್ಟು ಗಟ್ಟಿಯಾಗುವುದು. ʼಪ್ರತಿ ನೋವಿನ ಕತೆ ಯಶಸ್ಸಿನೊಂದಿಗೆ ಮುಕ್ತಾಯವಾಗುವುದು ಅಂತೆಯೆ ಪ್ರತಿ ಯಶಸ್ಸಿನ ಹಿಂದೆ ಒಂದು ನೋವಿನ ಕತೆ ಇರುತ್ತದೆʼ ಎಂಬ ಪ್ರಾಜ್ಞರ ಅನುಭವದ ನುಡಿಯನ್ನು ಅಲ್ಲಗಳೆಯಲಾಗದು. ʼಬಿರಿದ ನೆನೆ ಫಲಕೆ ಮನೆʼ ಅಂದರೆ ಮೊಗ್ಗು ಅರಳಿ ಹೂವಾದಾಗಲೇ ರಸವತ್ತಾದ ಹಣ್ಣಾಗಲು ಸಾಧ್ಯವಾಗುವುದು. ಮನಸ್ಸು ಕೂಡ ಕಷ್ಟ, ಸಂಕಟಗಳ ಕುಲುಮೆಯಲಿ ಬೆಂದು ಪಕ್ವವಾದಗಲೇ ಪರಿಪೂರ್ಣವಾದ ಅನುಭವ ದೊರಕುವುದು

ಮೂಗಿದ್ದರಿದೆ ಶೀತ, ಕಣ್ಣಿದ್ದರಿದೆ ಉರಿತ|
ಕಾಲಿದ್ದರಿದೆ ಊತ ಉಸಿರಿರುವತನಕ|
ದೇಹಧಾರಣೆ ಮಾಡಿ ನೋವ ಹಂಗಿಸುವೇಕೆ?|
ಮುದದ ಜೊತೆ ಇದೆ ಕಷ್ಷ – ಮುದ್ದುರಾಮ||

ಎಂಬ ಕೆ. ಶಿವಪ್ಪನವರ ನುಡಿಯಂತೆ ದೇಹಕ್ಕೆ ಕಾಯಿಲೆಗಳು ಬರುವಂತೆ ಬದುಕಿನಲಿ ನೋವುಗಳು ಬರುವುದು ಸಹಜ. ಸೋಲು, ಅವಮಾನ, ಸಂಕಟಗಳೆಲ್ಲ ಬದುಕನ್ನು ಗಟ್ಟಿಗೊಳಿಸುತ್ತವೆ. ವಿಧಿ ಬದುಕಿನಲ್ಲಿ ಪರಿಪರಿ ಪರೀಕ್ಷೆಗಳನ್ನು ಒಡ್ಡುತ್ತದೆ. ಬಗೆಬಗೆಯ ಪೆಟ್ಟುಗಳನ್ನು ನೀಡಿ ಬದುಕಿಗೆ ಅಗತ್ಯವಾದ ಪಾಠವನ್ನು ಕಲಿಸುತ್ತದೆ. ಕಷ್ಟಕಾರ್ಪಣ್ಯಗಳು ಬಂದಾಗ ಯಾರನ್ನೂ ದೂಷಿಸದೆ ಸ್ವೀಕರಿಸಬೇಕು. ಕತ್ತಲಿಲ್ಲದೆ ಬೆಳಕಿಲ್ಲ, ಸೋಲಿಲ್ಲದೆ ಗೆಲುವಿಲ್ಲ, ನೋವಿಲ್ಲದೆ ನಲಿವಿಲ್ಲ, ಪೆಟ್ಟು ಬೀಳದೆ ಮೂರ್ತಿಯಾಗುವುದಿಲ್ಲ ಎನ್ನುವ ವಾಸ್ತವವನ್ನು ಅರಿತು ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?error: Content is protected !!
Scroll to Top