ಕಾಸರಗೋಡು : ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಕಳ ಜೇಸಿಸ್ ವಿದ್ಯಾಸಂಸ್ಥೆಯ ಶಿಕ್ಷಕಿ ವಂದನಾ ರೈ ಅವರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ನ. 19 ರಂದು ಉಪ್ಪಳದ ಬಾಯಾರ್‌ಪದವು ಪ್ರಶಾಂತಿ ವಿದ್ಯಾ ಕೇಂದ್ರದ ಸಭಾಂಗಣದಲ್ಲಿ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಪ್ರದೀಪ ಕುಮಾರ ಕಲ್ಕೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಜಯಂತಿ, ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಡಾ. ಎಂ. ಪಿ. ಶ್ರೀನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಾಸುದೇವ ಹೊಳ್ಳ, ಪ್ರಶಾಂತಿ ವಿದ್ಯಾಲಯದ ಉಪಾಧ್ಯಕ್ಷ ಪೆಲ್ತಡ್ಕ ರಾಮಕೃಷ್ಣ ಭಟ್, ಮುಂಬೈ ಅಂಧೇರಿ ಕರ್ನಾಟಕ ಸಂಘದ ಸಂಸ್ಥಾಪಕ ಕೃಷ್ಣ ಬಿ. ಶೆಟ್ಟಿ, ಮಂಜೇಶ್ವರ ಸಾಂಸ್ಕೃತಿಕ ಮುಖಂಡ ಅರಿಬೈಲು ಗೋಪಾಲ ಶೆಟ್ಟಿ , ಕೊಚ್ಚಿನ್ ಕನ್ನಡ ಸಂಘದ ಉಪಾಧ್ಯಕ್ಷ ಗಿರೀಶ್ ಪಡ್ಕೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್, ಸಂಚಾಲಕ ಎ.ಆರ್.ಸುಬ್ಬಯ್ಯಕಟ್ಟೆ, ಕೋಶಾಧಿಕಾರಿ ಝಡ್‌ಎ ಕಯ್ಯಾರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ವಿದ್ಯಾಗಣೇಶ ಅಣಂಗೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ಅನೇಕ ಜಾನಪದ, ಯಕ್ಷಗಾನ ಹಾಗೂ ಇನ್ನಿತರ ಕಲಾ ರೂಪಕಗಳು ಪ್ರದರ್ಶನಗೊಂಡಿತು.