ಕ್ರೀಡಾ ಭಾರತಿ ಕಾರ್ಕಳ ತಾಲೂಕು ಘಟಕ ಆಯೋಜನೆ
ಕಾರ್ಕಳ : ಕ್ರೀಡಾ ಭಾರತಿ ಕಾರ್ಕಳ ತಾಲೂಕು ಘಟಕ ವತಿಯಿಂದ ನ. 19 ರಂದು ಮುಡಾರು ಗ್ರಾಮದ ಬಜಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಹ್ವಾನಿತ ತಂಡಗಳ ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟ ಜರುಗಿತು.
ತರುಣರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮುಡಾರು ಚೌಕಿ ತಂಡ, ದ್ವಿತೀಯ ಸ್ಥಾನ ಈದು ಹಾಗೂ ತೃತೀಯ ಸ್ಥಾನವನ್ನು ಮುಡಾರು ದಿಡಿಂಬಿರಿ ತಂಡ ಗೆದ್ದಿತು. ಬಾಲಕರ ವಿಭಾಗದಲ್ಲಿ ದುರ್ಗ ಮುಂಡ್ಲಿ ಪ್ರಥಮ, ಮುಡಾರು ದಿಡಿಂಬಿರಿ ದ್ವಿತೀಯ ಹಾಗೂ ನಲ್ಲೂರು ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಒಟ್ಟು 21 ತಂಡಗಳು ಭಾಗವಹಿಸಿದ್ದವು.
ಸಭಾ ಕಾರ್ಯಕ್ರಮವನ್ನು ಬಜಗೋಳಿಯ ಖ್ಯಾತ ವೈದ್ಯ ಡಾ. ರಾಮದಾಸ್ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಕಳ ತಾಲೂಕು ಸಂಘಚಾಲಕ ಉದಯ್ ಕುಮಾರ್ ಶೆಣೈ ಅಧ್ಯಕ್ಷತೆ ವಹಿಸಿದರು. ಕ್ರೀಡಾ ಭಾರತೀಯ ವಿಭಾಗ ಸಂಯೋಜಕ ಪ್ರಸನ್ನ ಶೆಣೈ ಕಾರ್ಕಳ ಪ್ರಸ್ತಾವನೆಗೈದರು. ಕ್ರೀಡಾ ಭಾರತಿಯ ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಂಜುನಾಥ ಶೆಟ್ಟಿ, ಬೈಲೂರು ಹಾಗೂ ಕಾರ್ಕಳ ತಾಲೂಕು ಅಧ್ಯಕ್ಷ ಶಿವಾನಂದ ಕಾಮತ್ ಉಪಸ್ಥಿತರಿದ್ದರು. ಅಜಿತ್ ಕಾಮತ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಸುಮಂತ ಜೋಶಿ ವಂದಿಸಿದರು.