ವಿದ್ಯಾರ್ಥಿಗಳು ವೃತ್ತಿ ಜೀವನಕ್ಕೆ ಪೂರಕವಾದ ಶಿಕ್ಷಣ ಪಡೆಯಬೇಕು – ಸದಾನಂದ ನಾಯಕ್
ಆರ್ಥಿಕ ಸಹಕಾರ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವುದು ಅಗತ್ಯ – ರವೀಂದ್ರ ಕಡಾರಿ
ಕಾರ್ಕಳ : ರಾಜಾಪುರ ಸಾರಸ್ವತ ಸೊಸೈಟಿ ಹಾಗೂ ರಾಜಾಪುರ ಸಾರಸ್ವತ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 12.79 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ನ. 19ರಂದು ಸೊಸೈಟಿಯ ಸಭಾಭವನದಲ್ಲಿ ಒಟ್ಟು 202 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ, ವೀನಸ್ ಗ್ರೂಪ್ ಪೂನಾ ಇದರ ಆಡಳಿತ ನಿರ್ದೇಶಕ ಮಾಳ ಸದಾನಂದ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ನೈತಿಕ ಮೌಲ್ಯಗಳ ಜೊತೆಗೆ ವೃತ್ತಿ ಜೀವನಕ್ಕೆ ಪೂರಕವಾದ ಶಿಕ್ಷಣ ಪಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ವಿದ್ಯಾರ್ಥಿಗಳು ಆರ್ಥಿಕ ಸಹಾಯ ಮಾಡಿದ ದಾನಿಗಳು ಹಾಗೂ ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಭವಿಷ್ಯದಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು. ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಎಲ್ಲವನ್ನು ತ್ಯಾಗ ಮಾಡುವ ಹೆತ್ತವರ ಬಗ್ಗೆ ಕಾಳಜಿ ಹಾಗೂ ಪ್ರೀತಿಯನ್ನು ಹೊಂದಬೇಕೆಂದರು.
ಸನ್ಮಾನ
ಮಾಳ ಸದಾನಂದ ನಾಯಕ್ ದಂಪತಿಯನ್ನು ಇದೇ ಸಂದರ್ಭದಲ್ಲಿ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.
ಭುವನೇಂದ್ರ ಕಾಲೇಜಿನ ನಿವೃತ ಪ್ರಾಂಶುಪಾಲ, ಟ್ರಸ್ಟಿ ವೈ. ಪಾಂಡುರಂಗ ನಾಯಕ್, ಟ್ರಸ್ಟಿ ಬಾಲಕೃಷ್ಣ ನಾಯಕ್, ಟ್ರಸ್ಟಿ ಕೊರಗಪ್ಪ ನಾಯಕ್ ಹಾಗೂ ಸೊಸೈಟಿಯ ನಿರ್ದೇಶಕರಾದ ಹರೀಶ್ಚಂದ್ರ ತೆಂಡೂಲ್ಕರ್ ಮಾಳ, ಮಂಜುನಾಥ ನಾಯಕ್ ಮಣಿಪಾಲ, ಮಂಜುನಾಥ ಪ್ರಭು ಹೆಬ್ರಿ, ಕೇಶವ ನಾಯಕ್ ಎಳ್ಳಾರೆ, ರಾಮಕೃಷ್ಣ ತೆಂಡೂಲ್ಕರ್ ಹಿರ್ಗಾನ, ಕಲಾವತಿ ಯು. ನಾಯಕ್ ಹಿರ್ಗಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೊಸೈಟಿಯ ಉಪಾಧ್ಯಕ್ಷ ಸುರೇಂದ್ರ ನಾಯಕ್ ಸ್ವಾಗತಿಸಿ, ಹರೀಶ್ ನಾಯಕ್ ನಿರೂಪಿಸಿದರು. ಟ್ರಸ್ಟಿ ಸದಾನಂದ ನಾಯಕ್ ಪ್ರಸ್ತಾವನೆಗೈದರು. ನಿರ್ದೇಶಕ ನೀರೆ ರವೀಂದ್ರ ನಾಯಕ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ನಾಯಕ್ ವಂದಿಸಿದರು.