ಅಪರಾಧ – ಅಪಘಾತ

ಕಾರ್ಕಳ : ಕಾರ್ಕಳ ಪೇಟೆಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬ ವೃದ್ಧ ಮಹಿಳೆಗೆ ಮಂಕುಬೂದಿ ಎರಚಿ ಚಿನ್ನದ ಸರ ಮತ್ತು 700 ರೂ. ನಗದು ಲಪಟಾಯಿಸಿದ ಘಟನೆ ಶನಿವಾರ ಸಂಭವಿಸಿದೆ.

ಸುಶೀಲ(77) ಎಂಬ ಮಹಿಳೆ ಕಾರ್ಕಳ ಬಸ್‌ಸ್ಟ್ಯಾಂಡ್‌ ಬಳಿಯಿರುವ ಕ್ಲಿನಿಕ್‌ಗೆ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 45 ವರ್ಷದ ವ್ಯಕ್ತಿಯೊಬ್ಬ ಬಂದು ನಿಮ್ಮ ಮೊಬೈಲ್ ಫೋನ್ ಕೊಡಿ ನಿಮ್ಮ ಮಗನ ಹತ್ತಿರ ಮಾತನಾಡಲಿಕ್ಕಿದೆ ಎಂದು ಹೇಳಿ ಫೊನ್ ತೆಗೆದುಕೊಂಡು ಮಾತನಾಡಿದಂತೆ ಮಾಡಿ ಮಗ ಫೋನ್ ತೆಗೆಯುತ್ತಿಲ್ಲ ಎಂದು ಹೇಳಿ ಮೊಬೈಲ್ ಫೋನ್ ತೆಗೆದುಕೊಂಡು ಮುಂದಕ್ಕೆ ಹೋಗಿದ್ದಾನೆ. ಮಹಿಳೆ ಅವನನ್ನು ಹಿಂಬಾಲಿಸಿದಾಗ ಅವನು ಮಾರ್ಕೆಟ್ ರಸ್ತೆ ಕಡೆಗೆ ನಡೆದುಕೊಂಡು ಹೋಗಿ ಅಲ್ಲಿ ಒಂದು ಅಂಗಡಿಯ ಮೆಟ್ಟಿಲಿನಲ್ಲಿ ಮಹಿಳೆಯನ್ನು ಕುಳ್ಳಿರಿಸಿ 500 ರೂ. ಕೊಡಿ ಈಗ ಕೊಡುತ್ತೇನೆಂದು ಹೇಳಿ ಪರ್ಸಿನಿಂದ 700 ರೂ. ತೆಗೆದುಕೊಂಡು ಈಗ ಬರುತ್ತೇನೆಂದು ಹೇಳಿ ಹೋಗಿದ್ದಾನೆ. ಸ್ವಲ್ಪಹೊತ್ತಿನಲ್ಲಿ ವಾಪಸು ಬಂದು ನಿಮ್ಮ ಚೈನ್ ಕೊಡಿ ನನ್ನ ತಾಯಿಗೆ ಅದೇ ರೀತಿಯ ಚೈನ್ ಮಾಡಿಸಲಿಕ್ಕಿದೆ ಎಂದು ಹೇಳಿ ಒಂದೂವರೆ ಪವನ್ ತೂಕದ ಹವಳದ ಚಿನ್ನದ ಸರವನ್ನು ತೆಗೆದುಕೊಂಡು ಈಗ ಬರುತ್ತೇನೆಂದು ಹೇಳಿ ಪಲಾಯನ ಮಾಡಿದ್ದಾನೆ. ಮೊಬೈಲ್ ಫೋನ್, ನಗದು ರೂಪಾಯಿ 700 ರೂ. ಮತ್ತು 30,000 ರೂ. ಮೌಲ್ಯದ ಹವಳ ಅಳವಡಿಸಿದ ಚಿನ್ನದ ಸರ ಮಹಿಳೆ ಕಳೆದುಕೊಂಡಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ : ಮಾಳ ಘಾಟ್ ಎಸ್‌ಕೆ ಬಾರ್ಡರ್ ಬಳಿ ಇನ್ನೊವ ಕಾರೊಂದು ಬೈಕ್‌ಗೆ ಡಿಕ್ಕಿಯಾದ ಘಟನೆ ಶನಿವಾರ ನಡೆದಿದ್ದು, ಪರಿಣಾಮ ಬೈಕ್‌ ಸವಾರ ರಾಮಕೃಷ್ಣ ಎಂಬವರಿಗೆ ಗಾಯವಾಗಿದೆ. ಕಳಸ ಕಡೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ (KA 05 MC2970 ) ಕಾರು ಅದೇ ದಿಕ್ಕಿನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ (KA 02 JT3080) ಎನ್ ಫೀಲ್ಡ್ ಬೈಕ್‌ಗೆ ಹಿಂದಿನಿಂದ ಡಿಕ್ಕಿಹೊಡೆದಿದ್ದು, ಸವಾರ ಬೈಕ್‌ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಕಾರು ಚಾಲಕನು ಅಪಘಾತದ ಬಳಿಕ ಗಾಯಾಳನ್ನು ಉಪಚರಿಸದೇ ಅಪಘಾತದ ಬಗ್ಗೆ ಠಾಣೆಗೆ ಮಾಹಿತಿ ನೀಡದೇ ಪರಾರಿಯಾಗಿರುತ್ತಾನೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜೆಕಾರು: ಶೀನ ಹೆಬ್ರಿ ಎಂಬವರ ಪುತ್ರ ಗಣೇಶ (23) ಎಂಬ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 19 ರಂದು ಸಂಭವಿಸಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಮಧ್ಯಾಹ್ನ 12ರಿಂದ 5 ಗಂಟೆ ನಡುವೆ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.error: Content is protected !!
Scroll to Top