ಉಡುಪಿ ಹತ್ಯಾಕಾಂಡ : ಕೃತ್ಯಕ್ಕೆ ಬಳಸಿದ ಚೂರಿ ವಶ

ಉಡುಪಿ: ಇಲ್ಲಿನ ಸಂತೆಕಟ್ಟೆ ಬಳಿ ನೇಜಾರಿನ ತೃಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಗೆ ಬಳಸಿದ ಚೂರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಪ್ರವೀಣ್‌ ಚೌಗುಲೆಯನ್ನು ಶನಿವಾರವೂ ವಿವಿಧ ಸ್ಥಳಗಳಲ್ಲಿ ಪೊಲೀಸರು ಮಹಜರಿಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಚೂರಿಯನ್ನು ಬಚ್ಚಿಟ್ಟ ಸ್ಥಳವನ್ನು ಅವನು ತೋರಿಸಿದ್ದಾನೆ.
ಕೃತ್ಯಕ್ಕೆ ಬಳಸಲಾದ ಚೂರಿಯನ್ನು ಮಂಗಳೂರಿನ ಬಿಜೈನಲ್ಲಿರುವ ಆತನ ಫ್ಲ್ಯಾಟ್‌ನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮನೆಯೊಳಗೆಯೇ ಅದನ್ನು ಬಚ್ಚಿಟ್ಟುಕೊಂಡು ಪೊಲೀಸರಿಗೆ ವಿವಿಧ ಕಥೆ ಹೇಳಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದ. 2 ದಿನಗಳಿಂದ ಪೊಲೀಸರು ಮೂಲ್ಕಿ, ಕೂಳೂರು ಸೇತುವೆ ಬದಿ, ಪದವಿನಂಗಡಿ, ಕೊಂಚಾಡಿಯ ರವಿಶಂಕರ ವಿದ್ಯಾಮಂದಿರದ ಬಳಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರೂ ಚೂರಿ ಪತ್ತೆಯಾಗಿರಲಿಲ್ಲ.
ಶನಿವಾರ ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಬಿಜೈನಲ್ಲಿರುವ ಆತನ ಫ್ಲ್ಯಾಟ್‌ಗೆ ಕರೆದುಕೊಂಡು ಹೋದ ವೇಳೆ ಚೂರಿ ಇರಿಸಿದ ಜಾಗವನ್ನು ತೋರಿಸಿದ್ದಾನೆ ಎನ್ನಲಾಗಿದೆ.
ಕೃತ್ಯಕ್ಕೆ ಬಳಸಿದ ಮಾಸ್ಕ್, ರಕ್ತಸಿಕ್ತ ಬಟ್ಟೆ, ಬಳಸಿದ ಕಾರು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದು ಸಿಟ್ಟಿನ ಭರದಲ್ಲಿ ನಡೆದ ಹತ್ಯಾಕಾಂಡವಲ್ಲ. ಆರೋಪಿ ಎಲ್ಲ ತಯಾರಿ ಮಾಡಿಕೊಂಡೇ ಹತ್ಯೆ ಮಾಡಲು ಹೋಗಿದ್ದ. ತಾನು ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಕಾರನ್ನು ಹೆಜಮಾಡಿ ಟೋಲ್‌ಗೇಟ್‌ನಿಂದ ಸ್ವಲ್ಪ ಮೊದಲೇ ಪಾರ್ಕ್‌ ಮಾಡಿದ್ದ. ಟೋಲ್‌ಗೇಟ್‌ ದಾಟಿ ಹೋದರೆ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗುತ್ತದೆ ಎಂದು ಅವನಿಗೆ ಗೊತ್ತಿತ್ತು. ಬಸ್‌ನಲ್ಲಿ ಉಡುಪಿಗೆ ಹೋಗಿ ರಿಕ್ಷಾ ಹಿಡಿದು ಅಯ್ನಾಜ್‌ಳ ಮನೆ ತಲುಪಿದ್ದ. ಹತ್ಯೆ ಮಾಡಿ ವಾಪಸು ಬರುವಾಗ ಕೂಡ ಯಾರದ್ದೋ ಬೈಕ್‌, ರಿಕ್ಷಾ, ನಡಿಗೆ ಎಂದು ತನಿಖೆಯ ದಿಕ್ಕುತಪ್ಪಿಸಲು ಸಾಕಷ್ಟು ಪ್ರಯತ್ನ ಮಾಡಿದ್ದ. ಆದರೆ ಮೊಬೈಲ್‌ ಫೋನ್‌ ಅವನ ಸುಳಿವು ನೀಡಿತ್ತು.error: Content is protected !!
Scroll to Top