ಆಮಂತ್ರಣ ಇಲ್ಲದಿದ್ದರೂ ರತನ್ ಟಾಟಾ ತನ್ನ ಡ್ರೈವರ್ ಮಗಳ ಮದುವೆಗೆ ಹೋದರು
ಬೈಂದೂರಿನ ವೆಂಕಟೇಶ್ ಕಿಣಿ ಅವರು ಯಾಕೆ ನಮಗೆ ಮಾದರಿ?
ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಕಚೇರಿಯಲ್ಲಿ ಸುಧಾ ಮೂರ್ತಿ ಅವರ ವೈಭವದ ಚೇಂಬರ್ ಇದೆ. ಅಲ್ಲಿ ಗೋಡೆಯಲ್ಲಿ ಉದ್ಯಮಿಗಳಾದ ಜೆ.ಆರ್.ಡಿ ಟಾಟಾ ಅವರ ದೊಡ್ಡ ಫೋಟೊ ಇದೆ. ಅದರ ಬಗ್ಗೆ ಸುಧಾ ಮೂರ್ತಿ ಅವರನ್ನು ಕೇಳಿದಾಗ ಅವರು ಕೊಟ್ಟ ಉತ್ತರ ಅದ್ಭುತ ಆಗಿತ್ತು.
“ಟಾಟಾ ಸರ್ ನನಗೆ ಮೊದಲು ಉದ್ಯೋಗ ನೀಡಿದವರು. ನಾನು ಇಂಜಿನೀಯರಿಂಗ್ ಮುಗಿಸಿ ಉದ್ಯೋಗ ಹುಡುಕುತ್ತಿದ್ದಾಗ ನನ್ನ ಮಾರ್ಕ್ ಕಾರ್ಡ್ ಕೂಡ ನೋಡದೆ ಅವರು ಕೆಲಸ ಕೊಟ್ಟವರು. ನಾನು ಅವರ ಕಂಪೆನಿಯಲ್ಲಿ ಒಬ್ಬ ಸಾಮಾನ್ಯ ಎಂಪ್ಲಾಯಿ ಆಗಿ ಕೆಲಸ ಮಾಡಿದ್ದೆ. ಮುಂದೆ ನಾನು ಮದುವೆ ಆಗಿ ಗರ್ಭಿಣಿ ಆಗಿದ್ದಾಗ ಟಾಟಾ ಸರ್ ನನ್ನನ್ನು ಕರೆದು ಆಫೀಸಿನ ಗ್ರೌಂಡ್ ಫ್ಲೋರ್‌ನಲ್ಲಿ ಕೆಲಸ ಮಾಡಮ್ಮ ಸಾಕು ಅಂದಿದ್ದರು. ಆಗ ಆಫೀಸಿನಲ್ಲಿ ಲಿಫ್ಟ್ ಇರಲಿಲ್ಲ. ಆದರೂ ನಾನು ಯಾವ ರಿಯಾಯಿತಿ ಕೂಡ ಬೇಡ ಎಂದು ಹೇಳಿದ್ದೆ. ಮುಂದೆ ನಾವು ಇನ್ಫೋಸಿಸ್ ಆರಂಭ ಮಾಡುವಾಗ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬರಬೇಕಾಯಿತು. ಆಗಲೂ ಟಾಟಾ ಸರ್ ಆಶೀರ್ವಾದ ಪಡೆದು ಬಂದಿದ್ದೆ. ಸರ್ ತುಂಬಾನೇ ಪ್ರೀತಿಯಿಂದ ನನ್ನನ್ನು ಕಳುಹಿಸಿಕೊಟ್ಟಿದ್ದರು. ಆಗ ಅವರ ಕಣ್ಣಲ್ಲಿ ನೀರಿತ್ತು” ಎಂದು ಸುಧಾ ಮೂರ್ತಿ ತನ್ನ ಮೊದಲ ಬಾಸ್ ಬಗ್ಗೆ ಭಾವುಕರಾಗಿ ಹೇಳುತ್ತಾರೆ.
ಈಗ ಸುಧಾ ಮೂರ್ತಿ ಮತ್ತು ಅವರ ಇನ್ಫೋಸಿಸ್ ಸಂಸ್ಥೆ ಭಾರತದ ಅತ್ಯುತ್ತಮ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾಗಿದೆ. ಸುಧಾ ಮೂರ್ತಿ ದಂಪತಿ ಕೋಟಿ ಕೋಟಿ ಚಾರಿಟಿ ಮಾಡುತ್ತಾರೆ. ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಇಂಗ್ಲೆಂಡ್ ಪ್ರಧಾನಿ ಅಳಿಯನಾಗಿ ಸಿಕ್ಕಿದ್ದಾರೆ. ಆದರೆ ಇವತ್ತಿಗೂ ತನ್ನ ನೌಕರರನ್ನು ಅದೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ತನ್ನ ಕಚೇರಿಗೆ ಬಂದು ಮೊದಲು ಟಾಟಾ ಸರ್ ಅವರಿಗೆ ನಮಸ್ಕಾರ ಮಾಡಿ ಮತ್ತೆ ಕುಳಿತುಕೊಳ್ಳುತ್ತಾರೆ.
ಧೀರುಭಾಯಿ ಅಂಬಾನಿಯದ್ದು ಇನ್ನೊಂದು ಮಾದರಿ
ರಿಲಯನ್ಸ್ ಮೂಲಕ ಉದ್ಯಮ ರಂಗವನ್ನು ಪ್ರವೇಶ ಮಾಡಿದ ಧೀರುಭಾಯಿ ಅಂಬಾನಿ ತನ್ನ ಕಂಪನಿಯ ಅಷ್ಟೂ ನೌಕರರನ್ನು ತನ್ನ ಯಶಸ್ಸಿನ ಪಾಲುದಾರರು ಎಂದು ಕರೆಯುತ್ತಿದ್ದರು. ತನ್ನ ಕಂಪನಿಯ ಅತಿ ಸಾಮಾನ್ಯ ನೌಕರನನ್ನು ಕೂಡ ಹೆಸರು ಹಿಡಿದೇ ಕರೆಯುತ್ತಿದ್ದರು. ಎಲ್ಲರಿಗೂ ಬಹುವಚನ ಬಳಸುವುದು ಅವರ ವಿಶೇಷ. ಕಂಪನಿಯ ನಿರ್ದೇಶಕ ಮಂಡಳಿ, ಮ್ಯಾನೇಜರ್, ಆಫೀಸರ್, ಗುಮಾಸ್ತ, ಅಟೆಂಡರ್, ಡ್ರೈವರ್ ಎಲ್ಲರನ್ನೂ ಒಂದೇ ರೀತಿ ಅವರು ನೋಡಿಕೊಳ್ಳುತ್ತಾರೆ. ವರ್ಷಕ್ಕೆ ಎರಡು ಬಾರಿ ಎಲ್ಲ ನೌಕರರಿಗೂ ಉಡುಗೊರೆ ಕೊಡುವುದನ್ನು ಅವರು ತಮ್ಮ ಕೊನೆಯವರೆಗೂ ಮರೆಯಲಿಲ್ಲ.
“ನಾನು ಜಾಸ್ತಿ ಓದಿಲ್ಲ. ನಾನು ಪೆಟ್ರೋಲ್ ಬಂಕ್ ಹುಡುಗನಾಗಿ ಕಠಿಣ ಪರಿಶ್ರಮದ ಮೂಲಕ ಈ ಹಂತಕ್ಕೆ ಬಂದಿದ್ದೇನೆ. ನನ್ನ ಸಂಪಾದನೆಯಲ್ಲಿ ಪ್ರತಿಯೊಬ್ಬ ನೌಕರನ ಬೆವರು ಇದೆ. ಆದ್ದರಿಂದ ಅವರೇ ನನ್ನ ಯಶಸ್ಸಿನ ಪಾಲುದಾರರು” ಎಂದವರು ಹೇಳಿದ್ದಾರೆ.
ಒಮ್ಮೆ ಅವರ ಆಪ್ತ ಸಹಾಯಕ ಒಬ್ಬ ಸಿಟ್ಟು ಮಾಡಿಕೊಂಡು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋದರೂ ಅವರು ಹೇಗೆ ಅವರನ್ನು ಹಿಂದೆ ಕರೆಸಿಕೊಂಡರು ಎಂಬ ಒಂದು ಸ್ಟೋರಿ ನಾನು ಹಿಂದೆ ಬರೆದಿದ್ದೆ. ತನ್ನ ಕಂಪನಿಯ ನೌಕರರನ್ನು ಉತ್ತಮವಾಗಿ ನೋಡಿಕೊಳ್ಳುವುದರಲ್ಲಿ ಅಂಬಾನಿ ಅದ್ಭುತವಾದ ಮಾದರಿ.

ರತನ್ ಟಾಟಾ ಅವರಿಗೆ ಹೋಲಿಕೆಯೇ ಇಲ್ಲ
ತನ್ನ ನೌಕರರನ್ನು ಪ್ರೀತಿ ಮಾಡುವುದರಲ್ಲಿ ಭಾರತದ ಮಹಾ ಉದ್ಯಮಿ ರತನ್ ಟಾಟಾ ಅವರಿಗೆ ಹೋಲಿಕೆಯೇ ಇಲ್ಲ. ಅದ್ಭುತ ಮಾನವೀಯತೆಯ ಖನಿ ಅವರು. ಪ್ರತಿಯೊಬ್ಬ ನೌಕರರಲ್ಲಿ ಅವರು ಕಂಪೆನಿಯ ಬಗ್ಗೆ Proud Feeling ಬರುವ ಹಾಗೆ ನೋಡಿಕೊಂಡಿದ್ದಾರೆ. ಕೋರೊನ ಬಿಕ್ಕಟ್ಟು ಬಂದಾಗಲೂ ತನ್ನ ನೌಕರರಿಗೆ ಪೂರ್ತಿ ಸಂಬಳ ಕೊಟ್ಟಿದ್ದಾರೆ. ಒಬ್ಬ ಸಾಮಾನ್ಯ ನೌಕರನ ದುಮ್ಮಾನಗಳನ್ನು ಪ್ರೀತಿಯಿಂದ ಆಲಿಸಿ ಪರಿಹಾರ ಮಾಡಿ ಕೊಡುತ್ತಾರೆ.
ಒಮ್ಮೆ ಏನಾಯಿತು ಅಂದರೆ ಅವರ ಕಂಪನಿಯ ಒಬ್ಬ ಸಾಮಾನ್ಯ ಡ್ರೈವರ್ ತನ್ನ ಮಗಳ ಮದುವೆಗೆ ರಜೆ ಕೇಳಿದ್ದ. ಆತನಿಗೆ ತನ್ನ ದೇವರಂತಹ ಧಣಿಗೆ ಮದುವೆಯ ಕಾಗದ ಕೊಡಲು ಸಂಕೋಚ ಆಯಿತು. ಆದರೆ ರತನ್ ಟಾಟಾ ಅವರು ಯಾರ ಮೂಲಕವೋ ವಿಷಯ ತಿಳಿದು ಮದುವೆಯ ಹಾಲ್ ಹುಡುಕಿ ಆ ಮದುವೆಗೆ ಗಿಫ್ಟ್ ಸಮೇತ ಬಂದು ನಿಂತು ವಧು-ವರರನ್ನು ಆಶೀರ್ವಾದ ಮಾಡಿದಾಗ ಆ ಡ್ರೈವರ್‌ನ ಫೀಲಿಂಗ್ ಹೇಗಿರಬಹುದು ಎಂದು ಯೋಚನೆ ಮಾಡಿ. ರತನ್ ಟಾಟಾ ಅವರ ಕಂಪನಿಯಲ್ಲಿ ಕೆಲಸ ಮಾಡುವ ನೌಕರರು ಕೆಲಸ ಬಿಟ್ಟು ಹೋಗುವ ಉದಾಹರಣೆಗಳು ಹೆಚ್ಚಿಲ್ಲ.
ಒಮ್ಮೆ ರತನ್ ಟಾಟಾ ಅವರಿಗೆ ಇಂಗ್ಲೆಂಡ್‌ನ ರಾಜಕುಮಾರ ಸ್ವತಃ ಫೋನ್ ಮಾಡಿ ‘ನಿಮಗೆ ಲೈಫ್‌ಟೈಮ್ ಸಾಧನೆಯ ಅವಾರ್ಡ್ ಕೊಡಬೇಕು ಎಂದು ಆಸೆ ಪಡುತ್ತಾ ಇದ್ದೇನೆ. ಅರಮನೆಯಲ್ಲಿಯೇ ಕಾರ್ಯಕ್ರಮ ಮಾಡುತ್ತೇನೆ. ನೀವು ದಯವಿಟ್ಟು ಬರಬೇಕು’ ಎಂದು ವಿನಂತಿ ಮಾಡಿದ್ದರು. ಆಗ ರತನ್ ಟಾಟಾ ‘ನಾನು ಸಾಕುತ್ತಿರುವ ಒಂದು ಬೀದಿನಾಯಿಗೆ ಸೌಖ್ಯ ಇಲ್ಲ. ಈ ಬಾರಿ ಬರಲು ಆಗ್ತಾ ಇಲ್ಲ ಸಾರಿ’ಎಂದಿದ್ದರು.

ವಿಜಯ ಸಂಕೇಶ್ವರ-ಇನ್ನೂ ಒಂದು ಹೆಜ್ಜೆ ಮುಂದೆ
ಇಂದು ಭಾರತದ ಅತಿ ದೊಡ್ಡ ಸಾರಿಗೆ ಉದ್ಯಮಿ ಆಗಿರುವ ವಿಜಯ ಸಂಕೇಶ್ವರ ಅವರು ಶಿಸ್ತಿನ ಸಿಪಾಯಿ ಎಂದೇ
ಕರೆಸಿಕೊಂಡಿದ್ದರೂ ತನ್ನ ನೌಕರರ ಕಷ್ಟಗಳನ್ನು ಆಲಿಸುವುದರಲ್ಲಿ ಮತ್ತು ಸ್ಪಂದಿಸುವುದರಲ್ಲಿ ಯಾವತ್ತೂ ಮುಂದೆ ಇರುತ್ತಾರೆ. ತಮ್ಮ ಸಂಸ್ಥೆಯ ಸಾವಿರಾರು ಜನ ವಾಹನ ಚಾಲಕರು ಮತ್ತು ನಿರ್ವಾಹಕರ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದ್ದಾರೆ. ಅವರ ಕುಟುಂಬದ ಕಾರ್ಯಕ್ರಮಗಳಿಗೆ ತಪ್ಪದೆ ಉಡುಗೊರೆಗಳ ಜತೆಗೆ ಹಾಜರಾಗುತ್ತಾರೆ. ಕೆಲವು ಬಾರಿ ಹೋಗಲು ಆಗದಿದ್ದರೆ ಉಡುಗೊರೆ ಖಂಡಿತ ಮಿಸ್ ಮಾಡುವುದಿಲ್ಲ. ಎಷ್ಟು ದೊಡ್ಡ ಉದ್ಯಮಿ ಆದರೂ ಒಬ್ಬ ಸಾಮಾನ್ಯ ನೌಕರನನ್ನು ಕೂಡ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರಿಂದ ಕರ್ತವ್ಯಲೋಪ ಆದರೆ ಒಮ್ಮೆ ಸಿಡುಕುತ್ತಾರೆ ಮತ್ತೆ ಅವರೇ ಕರೆದು ಬುದ್ಧಿ ಹೇಳುತ್ತಾರೆ.

ಕರಾವಳಿಯ ಕೆ. ವೆಂಕಟೇಶ್ ಕಿಣಿ ಅದೇ ಮಾದರಿ
ಇತ್ತೀಚೆಗೆ ನಾನು ಭಾಗವಹಿಸಿದ ಕರಾವಳಿಯ ಒಂದು ಕಾರ್ಯಕ್ರಮ ನನ್ನನ್ನು ಕರಗಿಸಿಬಿಟ್ಟಿತ್ತು. ಭಟ್ಕಳ ಮತ್ತು ಬೈಂದೂರಿನಲ್ಲಿ ಭಾರತ್ ಗ್ಯಾಸ್ ವಿತರಣೆ ಮಾಡುವ ಉದ್ಯಮಿ ಕೆ.ವೆಂಕಟೇಶ್ ಕಿಣಿ ಅವರು ಈ ಉದ್ಯಮದಲ್ಲಿ 25 ವರ್ಷಗಳನ್ನು ಕ್ರಮಿಸಿ ಮುಂದೆ ಬಂದಿದ್ದಾರೆ. ಇತ್ತೀಚೆಗೆ ಅವರು ತನ್ನ ಐವತ್ತಕ್ಕೂ ಹೆಚ್ಚು ನೌಕರರ ಕೌಟುಂಬಿಕ ಸಮ್ಮಿಲನ ಮಾಡಿದ್ದರು. ಪ್ರತಿಯೊಬ್ಬ ನೌಕರ ಕುಟುಂಬ ಸಮೇತ ಬರಬೇಕು ಎಂದು ಸೂಚನೆ ಕೊಟ್ಟಿದ್ದರು. ಅವರಿಗೆ ನನ್ನಿಂದ ತರಬೇತು ಮಾಡಿದ್ದರು. ನಂತರ ಪ್ರತಿಯೊಬ್ಬ ನೌಕರನ ಕುಟುಂಬವನ್ನು ವೇದಿಕೆಗೆ ಕರೆದು ತನ್ನ ಹೆಂಡತಿ ಮತ್ತು ಮಗಳ ಜತೆ ನಿಂತು ಎಲ್ಲರನ್ನೂ ಶಾಲು ಹೊದೆಸಿ, ಸ್ಮರಣಿಕೆ ಕೊಟ್ಟು, ದೀಪಾವಳಿಯ ಉಡುಗೊರೆ ಕೊಟ್ಟು ಸನ್ಮಾನ ಮಾಡಿದರು. ಡಿಸೆಂಬರ್ ತಿಂಗಳಲ್ಲಿ ನಡೆಯುವ ತಮ್ಮ ಮಗಳ ಮದುವೆಯ ಆಮಂತ್ರಣವನ್ನು ಪ್ರೀತಿಯಿಂದ ನೀಡಿದರು. ಅದರ ಜತೆಗೆ ಎಲ್ಲರಿಗೂ ಚೆಕ್ ಇತ್ತು.

ಒಬ್ಬೊಬ್ಬ ನೌಕರ ಕೂಡ ತನ್ನ ಹೆಂಡತಿ, ಮಕ್ಕಳ ಜತೆಗೆ ಕುಳಿತು ಸನ್ಮಾನ ಸ್ವೀಕಾರ ಮಾಡಿದ್ದು ಅವರ ಮಟ್ಟಿಗೆ ಒಂದು ಸ್ಮರಣೀಯ ಕ್ಷಣ ಆಗಿತ್ತು. ಭರ್ಜರಿ ಊಟ ಕೂಡ ಏರ್ಪಾಡು ಆಗಿತ್ತು.
ಆ ದಿನ ಕಿಣಿ ಸರ್ ಹೇಳಿದ ಎರಡು ಮಾತು ನನಗೆ ಭಾರೀ ಟಚ್ ಆಯಿತು.
“ನಾನು ಭಾರಿ ಕಷ್ಟಪಟ್ಟು ಈ ಉದ್ಯಮದಲ್ಲಿ ಬೆಳೆದವನು. ನಾನು ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು, ಲಾರಿ ಓಡಿಸಿ ಬೆವರು ಹರಿಸಿ ಮೇಲೆ ಬಂದಿದ್ದೇನೆ. ನಾನು ಆ ದಿನಗಳನ್ನು ಮರೆತಿಲ್ಲ. ನೀವೂ ಇದೇ ರೀತಿ ಬೆಳೆದು ನಿಮ್ಮದೇ ಉದ್ಯಮ ಸ್ಥಾಪನೆ ಮಾಡುವ ಮಟ್ಟಕ್ಕೆ ಏರಬೇಕು”.
ಜಗತ್ತು ಇಂದು ಪಕ್ಕಾ ವ್ಯಾವಹಾರಿಕ ಆಗುತ್ತಿರುವ ಸಂದರ್ಭ ಕಿಣಿ ಸರ್ ಅಂತವರು ಭಿನ್ನವಾಗಿ ನಿಲ್ಲುತ್ತಾರೆ.
