ಎಚ್ಎಸ್ಆರ್ಪಿ ಅಳವಡಿಸಲು 2024ರ ಫೆಬ್ರವರಿ 17ರ ತನಕ ಅವಕಾಶ
ಬೆಂಗಳೂರು: ಹಳೆಯ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ನೇಮ್‌ಪ್ಲೇಟ್ ಅಳವಡಿಸುವ ಅವಧಿಯನ್ನು ಸಾರಿಗೆ ಇಲಾಖೆ ಮೂರು ತಿಂಗಳು ಕಾಲ ವಿಸ್ತರಿಸಿದೆ.
ದೀಪಾವಳಿ ಸಂದರ್ಭದಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಅಳವಡಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡುವುದಾಗಿ ಹೇಳಿದ್ದರು. ಇದೀಗ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ. 2024ರ ಫೆಬ್ರವರಿ 17ರವರೆಗೆ ಅವಧಿಯನ್ನು ವಿಸ್ತರಣೆ ಮಾಡಿದೆ.
1-4-2019ಕ್ಕಿಂತ ಮೊದಲು ನೋಂದಾಯಿಸಲಾದ ವಾಹನಗಳಿಗೆ ನವೆಂಬರ್ 17, 2023ರೊಳಗಾಗಿ ಎಚ್‌ಎಸ್ಆರ್‌ಪಿ ಅಳವಡಿಸಲು ಈ ಹಿಂದೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದೀಗ ಕಾಲಾವಕಾಶವನ್ನು ಫೆಬ್ರವರಿ 17, 2024ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಏಪ್ರಿಲ್ 1, 2019ಕ್ಕಿಂತ ಮೊದಲು ನೋಂದಾಯಿಸಲಾದ ವಾಹನಗಳ ಮಾಲೀಕರು ಫೆಬ್ರವರಿ 17, 2024ರೊಳಗಾಗಿ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಕೆ ಮಾಡಿಕೊಳ್ಳುವಂತೆ ಈ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ತಿಳಿಸಲಾಗಿದೆ.
ಹೀಗೆ ಎಚ್‌ಎಸ್‌ಆರ್‌ಪಿ ಪಡೆಯಬಹುದು
ಸಾರಿಗೆ ಇಲಾಖೆಯ ವೆಬ್‌ಸೈಟ್ http://www.siam.in ನಲ್ಲಿ ‘Book HSRP’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ನಂಬರ್ ಪ್ಲೇಟ್ ಪಡೆಯುವ ವಾಹನ ತಯಾರಕರನ್ನು ಆಯ್ಕೆಮಾಡಿ ಮತ್ತು ವಾಹನದ ವಿವರವನ್ನು ಭರ್ತಿ ಮಾಡಬೇಕು.
ಎಚ್‌ಎಸ್‌ಆರ್‌ಪಿ ಜೋಡಣೆಗಾಗಿ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ ಮತ್ತು ಆನ್‌ಲೈನ್‌ನಲ್ಲಿ ಎಚ್‌ಎಸ್‌ಆರ್‌ಪಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. (ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿ ಮಾಡಬೇಕು).
ವಾಹನ ಮಾಲೀಕರ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ. ಮಾಲೀಕರು ಅವರ ಅನುಕೂಲಕ್ಕೆ ಮತ್ತು ವೆಬ್‌ಸೈಟ್‌ಗೆ ಅನುಗುಣವಾಗಿ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು.
ಮಾಲೀಕರು ನಂತರ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್ ಪಿ ಅಳವಡಿಸಲು ವಾಹನ ತಯಾರಕರು ಅಥವಾ ಡೀಲರ್ ಬಳಿ ಭೇಟಿ ನೀಡಬೇಕು.