ಕಾಂಗ್ರೆಸ್‌ಗೆ ಬಿಜೆಪಿ ಪೋಸ್ಟರ್ ಮೂಲಕ ತಿರುಗೇಟು
ಬೆಂಗಳೂರು : ಬಿಜೆಪಿ ಸರ್ಕಾರ ಇರುವಾಗ ಪೇಸಿಎಮ್ ಮತ್ತಿತರ ಪೋಸ್ಟರ್ಗಳನ್ನು ಅಂಟಿಸಿ ಚುನಾವಣೆಯಲ್ಲಿ ಲಾಭಮಾಡಿಕೊಂಡಿದ್ದ ಕಾಂಗ್ರೆಸ್‌ಗೆ ಬಿಜೆಪಿ ಈಗ ಅದೇ ಪೋಸ್ಟರ್‌ಗಳ ಮೂಲಕ ತಿರುಗೇಟು ನೀಡುತ್ತಿದೆ. ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರು, ಜಿಲ್ಲೆಯ ಕೆಇಬಿ ಕಚೇರಿ, ತಾಲೂಕು ಕಚೇರಿ ಸೇರಿದಂತೆ ಹಲವೆಡೆ ಪೋಸ್ಟರ್ಗಳನ್ನು ಅಂಟಿಸಿದ್ದು, ಇದು ರಾಜ್ಯಾದ್ಯಂತ ಗಮನ ಸೆಳೆದಿದೆ.
ಯತೀಂದ್ರ ತಂದೆಗೆ ಫೋನ್ ಮಾಡಿ ವರ್ಗಾವಣೆ ವಿಚಾರವಾಗಿ ಮಾತನಾಡಿರುವ ವೀಡಿಯೊ ಬಿಜೆಪಿಗೆ ಕಾಂಗ್ರೆಸ್ ಸರಕಾರದ ವಿರುದ್ಧ ಸಮರ ಸಾರಲು ಉತ್ತಮ ಅಸ್ತ್ರವಾಗಿ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಕೆ.ಜೆ ಜಾರ್ಜ್ ಕಚೇರಿ, ಕೆಇಬಿ ಕಚೇರಿ, ತಾಲೂಕು ಕಚೇರಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಂಟಿಸಿರುವ ಪೋಸ್ಟರ್ಗಳು ರಾರಾಜಿಸುತ್ತಿವೆ. ಒಂದು ಪೋಸ್ಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಎಂದು ಕರೆಯಲಾಗಿದೆ.
ರಾಜ್ಯದಲ್ಲಿ ವಿದ್ಯುತ್ ಕಡಿತ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಇಂಧನ ಇಲಾಖೆ ಸಚಿವರ ವಿರುದ್ಧ ಪೋಸ್ಟರ್ ಅಂಟಿಸಲಾಗಿದೆ. ರಾಜ್ಯವನ್ನು ಕತ್ತಲೆಗೆ ದೂಡಿ ಇಂಧನ ಸಚಿವ ಕೆ.ಜೆ ಜಾಜ್೯ ಕಾಣೆಯಾಗಿದ್ದಾರೆ. ಹುಡುಕಿ ಕೊಟ್ಟವರಿಗೆ ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಉಚಿತ, ಖಚಿತ, ನಿಶ್ಚಿತ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ವೈಎಸ್ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಸಂಗ್ರಹ ಸಮಿತಿಯ ಸುತ್ತೋಲೆ ಎಂಬ ಶೀರ್ಷಿಕೆ ನೀಡಿ, ಯಾವುದೇ ಸರ್ಕಾರಿ ಸಂಬಂಧಿತ ಸೇವೆಗಳಿಗಾಗಿ ಹಲೋ ಅಪ್ಪಾ.. ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಪೇಮೆಂಟ್ ಮಾಡಿ ಎಂದು ಬರೆಯಲಾಗಿದೆ. ಈ ಪೋಸ್ಟರ್‌ನಲ್ಲಿ ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಎಂದು ಕರೆಯಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂ ಎಂದು ಬಿಜೆಪಿ ಆರೋಪಿಸುತ್ತಲೇ ಇದೆ. ಇದೀಗ ಪೋಸ್ಟರ್ ಮೂಲಕವೂ ಕುಟುಕಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಕೆ.ಜೆ ಜಾರ್ಜ್ ಸಂಭಾಷಣೆ ನಡೆಸುವ ರೀತಿಯಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಈ ತಿಂಗಳ ಕಪ್ಪ ಎಲ್ಲಿ ಎಂದು ಸೋನಿಯಾ ಗಾಂಧಿ ಕೇಳುತ್ತಾರೆ. ಇದಕ್ಕೆ ಕೆ.ಜೆ ಜಾರ್ಜ್ ಈಗ ತಾನೇ ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದೀವಿ. ಬರುತ್ತೆ ತಡೀರಿ ಮೇಡಂ ಎಂದು ಬರೆಯಲಾಗಿದೆ.

ಬಸ್ ಟಿಕೆಟ್ ದರ ಸದ್ದಿಲ್ಲದೆ ಏರಿಸಿದ್ದನ್ನು ಮುಂದಿಟ್ಟುಕೊಂಡು ಪೋಸ್ಟರ್ ಅಂಟಿಸಲಾಗಿದೆ. ಫ್ರೀ ಬಸ್ ಟಿಕೆಟ್ ಎಂದು ನಂಬಿಸಿ 3 ಬಾರಿ ಬಸ್ ಟಿಕೆಟ್ ದರ ಏರಿಸಲಾಗಿದೆ. ಮೈಸೂರು-ಬೆಂಗಳೂರಿಗೆ 160 ರೂ. ಇದ್ದ ಟಿಕೆಟ್ ದರ ಈಗ 200 ರೂ. ಆಗಿದೆ. ಒಂದು ಕಡೆ ಸುಲಿಗೆ.. ಇನ್ನೊಂದು ಕಡೆ ಉಚಿತ.. ಇದು ಫ್ರೀ ಭಾಗ್ಯವಲ್ಲ, ಹಗಲು ದರೋಡೆ ಎಂದು ಇನ್ನೊಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಐದು ಗ್ಯಾರಂಟಿಗಳು ಎಂದು ಶೀರ್ಷಿಕೆಯುಳ್ಳ ಪೋಸ್ಟರ್‌ನಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕರೆಂಟ್ ಬಿಲ್ ಏರಿಕೆ, ಲೋಡ್ ಶೆಡ್ಡಿಂಗ್ ಶುರು, ಸದ್ದಿಲ್ಲದೆ ಬಸ್ ದರ ಏರಿಕೆ ಮಾಡಿದ್ದು, ಕಾವೇರಿ ನೀರನ್ನು ಬೇಕಾಬಿಟ್ಟಿ ತಮಿಳುನಾಡಿಗೆ ದಾನ ನೀಡಿದ್ದು, ಸರ್ಕಾರಿ ಕಾರ್ಯಕ್ರಮಗಳ ಆಚರಣೆಗೆ ಅನುದಾನ ನೀಡದೆ ಸುಮ್ಮನೆ ಕೂತಿದ್ದು, ಆಸ್ತಿ ನೋಂದಣಿ ದರ ಏರಿಕೆ, ಗೃಹಲಕ್ಷ್ಮೀ ಬರುತ್ತಿಲ್ಲ, ಶಕ್ತಿ ಯೋಜನೆಗೆ ಬಸ್ ಸಾಲ್ತಿಲ್ಲ, ಯುವನಿಧಿಯಿನ್ನೂ ಶುರುವೇ ಆಗಿಲ್ಲ ಎಂದು ಬರೆಯಲಾಗಿದೆ.