41 ದಿನಗಳ ಯಾತ್ರೆಗಾಗಿ ಸಕಲ ಸಿದ್ಧತೆ
ಶಬರಿಮಲೆ : ಎರಡು ತಿಂಗಳ ಪುಣ್ಯಯಾತ್ರೆಗಾಗಿ ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಬಾಗಿಲನ್ನು ತೆರೆಯಲಾಗಿದೆ. ಮಂಡಳ-ಮಕರವಿಳಕ್ಕು ಯಾತ್ರೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು. ಇಂದಿನಿಂದ (ನ.17) 41 ದಿನಗಳ ಶಬರಿಮಲೆ ಯಾತ್ರೆ ಆರಂಭವಾಗಲಿದೆ. ಲಕ್ಷಾಂತರ ಅಯ್ಯಪ್ಪ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಳ್ಳಲಿದ್ದಾರೆ.
ಗುರುವಾರ ದೇವಾಲಯದ ತಂತ್ರಿ (ಮುಖ್ಯ ಅರ್ಚಕ) ಮಹೇಶ್ ಮೋಹನಾರು ಅವರ ನೇತೃತ್ವದಲ್ಲಿ ಅಯ್ಯಪ್ಪ ಸನ್ನಿಧಿಯ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿದೆ. ಇದರ ಜತೆಗೆ ಮತ್ತೊಬ್ಬ ಮುಖ್ಯ ಅರ್ಚಕ ಕೆ.ಜಯರಾಮನ್ ನಂಬೂದಿರಿ ಅವರ ಸಮ್ಮುಖದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ.
ಅಯ್ಯಪ್ಪ ಭಕ್ತರು ಪಂಪಾ ನದಿಯಲ್ಲಿ ಸಾನ್ನ ಮಾಡಿ, ಹದಿನೆಂಟು ಮೆಟ್ಟಿಲು ಹತ್ತಿ ಅಯ್ಯಪ್ಪನ ನೋಡಲು ಕಾತುರದಿಂದ ಕಾಯುತ್ತಿದ್ದರು. ಮಲಯಾಳಂ ಕ್ಯಾಲೆಂಡರ್ ಪ್ರಕಾರ 41 ದಿನಗಳ ಕಾಲ ದೇಗುಲದಲ್ಲಿ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಯಾತ್ರೆ ಆರಂಭವಾಗಲಿದೆ. ಜನವರಿಯಲ್ಲಿ ಮಕರ ಸಂಕ್ರಾತಿಯಂದು ಮಕರವಿಳಕ್ಕು ನೆರವೇರಲಿದ್ದು, ಈ ಸಮಯದಲ್ಲಿ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ.
ಈಗಾಗಲೇ ದೇವಾಲಯದಲ್ಲಿ ಎಲ್ಲ ಕಾರ್ಯಕ್ರಮಗಳು ಆರಂಭವಾಗಿದ್ದು, ಆಡಳಿತ ವ್ಯವಸ್ಥೆಯಲ್ಲೂ ಕೂಡ ಬದಲಾವಣೆಗಳು ಆಗಿವೆ. ಶಬರಿಮಲೆ ಮತ್ತು ಮಲಿಕಪ್ಪುರಂ ದೇವಸ್ಥಾನದ ನೂತನ ‘ಮೇಲ್ಶಾಂತಿ’ಗಳಾಗಿ (ಪ್ರಧಾನ ಅರ್ಚಕ) ಪಿ.ಎನ್ ಮಹೇಶ್ ಮತ್ತು ಪಿ.ಜಿ ಮುರಳಿ ಅವರನ್ನು ನೇಮಕ ಮಾಡಲಾಗಿದೆ. ಇದರ ಜತೆಗೆ ದೇವಾಲಯಕ್ಕೆ ಬರುವ ಭಕ್ತರಿಗೆ ರಕ್ಷಣೆ ಹಾಗೂ ಮೂಲಸೌಕರ್ಯಗಳನ್ನು ಕೂಡ ಹೆಚ್ಚಿಸಲಾಗಿದೆ. ಆಸ್ಪತ್ರೆ ಹಾಗೂ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.