ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾದ ಕಾರ್ಮಿಕ
ಅಬುದಾಬಿ: 11 ವರ್ಷದಿಂದ ಯುಎಇಯಲ್ಲಿ ಉದ್ಯೋಗಿಯಾಗಿರುವ ಕೇರಳದ ಶ್ರೀಜು (39) ಎಂಬವರು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗಿದ್ದಾರೆ.
ಶ್ರೀಜುಗೆ ಲಾಟರಿಯಲ್ಲಿ 45 ಕೋಟಿ ರೂ. ಬಹುಮಾನ ಸಿಕ್ಕಿದೆ. ಯುಎಇಯಲ್ಲಿ ಸಣ್ಣ ಸಂಬಳದ ನೌಕರಿ ಮಾಡುತ್ತಿದ್ದ ಶ್ರೀಜು ಊರಲ್ಲೊಂದು ಸ್ವಂತ ಮನೆ ಕಟ್ಟುವ, ಉತ್ತಮವಾದ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದರು. ಆದರೆ ಬರುತ್ತಾ ಇದ್ದ ಸಂಬಳ ಮಾತ್ರ ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಹೀಗಿರುವಾಗ ಏಕಾಏಕಿ ಲಾಟರಿ ಲಕ್ಷ್ಮೀ ಒಲಿದು ಬಂದಿದ್ದು, ಎಲ್ಲ ಕನಸುಗಳ ಈಡೇರುವ ಕಾಲ ಕೂಡಿ ಬಂದಿದೆ.
ಕೆಲ ದಿನಗಳ ಹಿಂದೆ ಮೆಹಜೂಜ್ ಲಾಟರಿ ಸಂಸ್ಥೆಯ ಲಾಟರಿಯನ್ನು ಖರೀದಿಸಿದ್ದರು. ಗುರುವಾರ ಬೆಳಗ್ಗೆ ಕೆಲಸಕ್ಕೆ ಕಾರಿನಲ್ಲಿ ಹೊರಡುವವರಿದ್ದ ಶ್ರೀಜು ಮಹಜೂಜ್ ಟಿಕೆಟ್ ಫಲಿತಾಂಶವನ್ನು ವೀಕ್ಷಿಸಿದಾಗ ಗೆದ್ದಿರುವುದು ತಿಳಿಯಿತು. ಅದೂ ಬರೋಬ್ಬರಿ 45 ಕೋಟಿ ರೂ.
ಗಲ್ಫ್ ದೇಶಗಳಲ್ಲಿ ಲಾಟರಿಗೆ ಭರ್ಜರಿ ಮೊತ್ತದ ಬಹುಮಾನ ಇರುತ್ತದೆ. ಈ ಬಹುಮಾನದ ಆಶೆಗೆ ಜನರು ಹಣ ಕೂಡಿಟ್ಟು ಟಿಕೆಟ್ ಖರೀದಿಸುತ್ತಾರೆ. ಶ್ರೀಜು ಕೂಡ ಹಲವಾರು ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರೂ ಬಹುಮಾನ ಬಂದಿರಲಿಲ್ಲ. ಆದರೂ ಛಲ ಬಿಡದೆ ಟೆಕೆಟ್ ಖರೀದಿಸುತ್ತಿದ್ದರು. ಇದೀಗ ಅವರಿಗೆ ಬಂಪರ್ ಬಹುಮಾನವೇ ಸಿಕ್ಕಿದೆ. ಗಲ್ಫ್ ದೇಶದ ಲಾಟರಿ ವಿಜೇತರಿಗೆ ತೆರಿಗೆ ಕಡಿತ ಮಾಡದೆ ಫುರ್ತಿ ಬಹುಮಾನದ ಹಣವನ್ನು ನೀಡುತ್ತಾರೆ.