ಸಮಾಜ ಸೇವೆಯೇ ರಾಮನಿಗೆ ಒಪ್ಪಿಸುವ ಹರಕೆ : ಪೇಜಾವರಶ್ರೀ

ಉಡುಪಿ : ಕೋಟ್ಯಂತರ ಭಕ್ತರ ಆಶಯದಂತೆ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀ ರಾಮನಿಗೆ ಪ್ರತ್ಯೇಕ ಹರಕೆ, ಸೇವೆ ಎಂಬುದು ಇರುವುದಿಲ್ಲ. ಬದಲಾಗಿ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೆ ಸೇವೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಶ್ರೀರಾಮ ಮಂದಿರದ ಮೂಲಕ ದೇಶದಲ್ಲಿ ರಾಮರಾಜ್ಯ ನಿರ್ಮಾಣದ ಕನಸು ಎಲ್ಲರದ್ದು. ಈ ಕನಸು ನನಸಾಗಬೇಕಾದರೆ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ಶ್ರೀ ರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ ಆಗಿರುತ್ತದೆ. ಭಕ್ತರಿಗಾಗಿ ಆರತಿ, ತೀರ್ಥ ಹಾಗೂ ಉತ್ತರ ಭಾರತದ ಸಿಹಿಯ ನೈವೇದ್ಯ ಇರುತ್ತದೆ. ಇದು ಬಿಟ್ಟರೆ ಹರಕೆ, ಸೇವೆ ಯಾವುದೂ ಇಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೂ ಆಗಿರುವ ಅವರು ತಿಳಿಸಿದ್ದಾರೆ.

ನಮ್ಮ ಪ್ರಮುಖ ಅಪೇಕ್ಷೆ ಇರುವುದು ಶ್ರೀರಾಮನ ಆದರ್ಶ, ರಾಮರಾಜ್ಯ ಸ್ಥಾಪನೆ ಉದ್ದೇಶ. ಇದು ಈಡೇರಬೇಕಾದರೆ, ಭಕ್ತರು ಸ್ವಯಂ ಆಗಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅಂದರೆ ರಾಮನ ದರ್ಶನ, ರಾಮನ ಭಕ್ತಿ, ದೇಶ ಸೇವೆ ಎಂದರೆ ಬೇರೆ ಅಲ್ಲ, ಅದೆಲ್ಲವೂ ಒಂದೇ ಎಂಬ ಭಾವದಿಂದ ನಮ್ಮ ಊರು, ಕೇರಿ, ಗ್ರಾಮಗಳಲ್ಲಿ ದುರ್ಬಲ, ಅಶಕ್ತರಿಗೆ, ದೀನರಿಗೆ ಕೈಲಾದ ರೂಪದಲ್ಲಿ ನೆರವಾಗಬೇಕು. ಆಡಂಬರದ ವಿವಾಹ, ಆಚರಣೆಗಳ ಬದಲು ಆ ಮೊತ್ತವನ್ನು ಸಮಾಜ ಸೇವೆಗೆ ನೀಡಿ ಕೃತಾರ್ಥರಾಗುವುದೇ ರಾಮನ ಸೇವೆ, ಅರ್ಥಾತ್‌ ದೇಶ ಸೇವೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024 ಜನವರಿ 22ರಿಂದ ಮಾ.10ರವರೆಗೆ 48 ದಿನಗಳ ಕಾಲ ನಡೆಯಲಿದೆ. ಜ.22ರಂದು ಅಭಿಜಿನ್‌ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ರಾಮನ ಭವ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ‍್ಳಲು ಅನನುಕೂಲ ಆಗಬಹುದು. ಆದರೆ ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ದೇಶದ ಎಲ್ಲ ಜನ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡುವುದಾಗಿ ಪೇಜಾವರ ಶ್ರೀ ಹೇಳಿದರು.







































error: Content is protected !!
Scroll to Top